16ನೇ ದಿನಕ್ಕೆ ಕಾಲಿಟ್ಟ ನಟ ದರ್ಶನ್ ಜೈಲು ವಾಸ; ಸರಿಯಾಗಿ ಊಟ, ನಿದ್ರೆ ಮಾಡದೆ ಹೈರಾಣು
ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ2 ಆಗಿರುವ ನಟ ದರ್ಶನ್ ಜೈಲಿನಲ್ಲಿ ಸಂಪೂರ್ಣ ಸೈಲೆಂಟ್ ಆಗಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಜೈಲಿನ ಬಳಿ ಆಪ್ತರು ಬಂದಿಲ್ಲ. ಅಭಿಮಾನಿಗಳು ಕೂಡ ಜೈಲಿನತ್ತ ಮುಖ ಮಾಡಿಲ್ಲ. ಇಂದು (ಜುಲೈ 7) ಭಾನುವಾರ ಆದ್ದರಿಂದ ಜೈಲಿನಲ್ಲಿ ಯಾರ ಭೇಟಿಗೂ ಅವಕಾಶ ಇಲ್ಲ. ನಾಳೆ ದರ್ಶನ್ ಕುಟುಂಬಸ್ಥರು ಹಾಗೂ ಕೆಲ ಆಪ್ತರು ಭೇಟಿ ನೀಡುವ ಸಾಧ್ಯತೆ ಇದೆ.
ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಜೈಲು ಸೇರಿ 16 ದಿನಗಳು ಆಗಿವೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಕಾಲ ಕಳೆಯುತ್ತಿದ್ದಾರೆ. ಹೊರಗೆ ಇದ್ದಾಗ ಐಷಾರಾಮಿ ಜೀವನ ನಡೆಸುತ್ತಿದ್ದ ಅವರಿಗೆ ಜೈಲು ವಾಸ ಕಷ್ಟ ಆಗಿದೆ. ಜೈಲಿಗೆ ಬಂದ ದಿನದಿಂದ ಸರಿಯಾಗಿ ಊಟ, ನಿದ್ರೆ ಮಾಡದೇ ಅವರು ಹೈರಾಣಾಗಿದ್ದಾರೆ. ಪ್ರತಿ ದಿನ ಜಿಮ್, ವರ್ಕೌಟ್, ಫಿಲ್ಮ್ ಶೂಟಿಂಗ್ ಎಂದು ಬ್ಯೂಸಿ ಆಗಿದ್ದ ದರ್ಶನ್ ಅವರು ಪರಪ್ಪನ ಅಗ್ರಹಾರಕ್ಕೆ ಬಂದ ಬಳಿಕ ದಿನಚರಿ ತಲೆ ಕೆಳಗಾಗಿದೆ. ಜೈಲಿನಲ್ಲಿ ಜಿಮ್ ಇಲ್ಲ, ಇಷ್ಟವಾದ ಮಾಂಸಹಾರ ಊಟವಿಲ್ಲ. ಇದರಿಂದ ದರ್ಶನ್ ಕಂಗಾಲಾಗಿದ್ದಾರೆ.
ಜೈಲಿನಲ್ಲಿ ಮಂಗಳವಾರ ಅಥವಾ ಶುಕ್ರವಾರದ ಒಂದು ದಿನದಲ್ಲಿ ಮಾಂಸಹಾರ ಊಟ ನೀಡಲಾಗುತ್ತದೆ. ಜೈಲಿನಲ್ಲಿ ವಾರಕ್ಕೆ ಒಮ್ಮೆ, ಅದು ಕೂಡ ಒಂದೇ ಹೊತ್ತು ಮಾಂಸದೂಟ ಮಾಡುತ್ತಿದ್ದಾರೆ ದರ್ಶನ್. ಜಿಮ್ ಹಾಗೂ ಮಾಂಸಹಾರ ಇಲ್ಲದ ಕಾರಣ ಅವರು ತೂಕ ಕಳೆದುಕೊಳ್ಳುತ್ತಿದ್ದಾರೆ. ಮಾನಸಿಕ ಹಾಗೂ ದೈಹಿಕವಾಗಿ ಕುಗ್ಗಿರುವ ಅವರು ದುಗುಡದಿಂದ ಮೌನಕ್ಕೆ ಶರಣಾಗಿದ್ದಾರೆ.
ಪರಪ್ಪನ ಅಗ್ರಹಾರದ ಸಹ ಬಂಧಿಗಳ ಜೊತೆ ದರ್ಶನ್ ಮಾತನಾಡುತ್ತಿಲ್ಲ. ಭದ್ರತಾ ಬ್ಯಾರಕ್ನ ಕೊಠಡಿಯಲ್ಲಿ ಮೌನಕ್ಕೆ ಶರಣಾಗಿದ್ದಾರೆ. ಜೈಲಿಗೆ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ ಭೇಟಿ ನೀಡಿದ ಬಳಿಕ ದರ್ಶನ್ ಕೊಂಚ ನಿರಾಳಗೊಂಡಿದ್ದರು. ಮಗನನ್ನು ಅಪ್ಪಿಕೊಂಡು ಅವರು ಕಣ್ಣೀರಿಟ್ಟಿದ್ದರು. ಜೈಲಿನ ಬಳಿ ನಿರಂತರವಾಗಿ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ವಿಶೇಷ ಚೇತನ ಅಭಿಮಾನಿ ಕೂಡ ತಂದೆ-ತಾಯಿ ಜೊತೆ ಜೈಲಿನ ಬಳಿ ಬಂದಿದ್ದ ವಿಷಯ ತಿಳಿದು ದರ್ಶನ್ಗೆ ಬೇಸರ ಆಗಿತ್ತು.
ಇದನ್ನೂ ಓದಿ: ದರ್ಶನ್ ಪಾತ್ರದ ಬಗ್ಗೆ ಹರಡಿದ್ದ ಗಾಳಿಸುದ್ದಿಗೆ ಸ್ಪಷ್ಟನೆ ನೀಡಿದ ‘ಕರಾವಳಿ’ ಸಿನಿಮಾ ತಂಡ
ಜೈಲಿನ ಅಧಿಕಾರಿಗಳ ಮುಖಾಂತರ ಅಭಿಮಾನಿಗಳಲ್ಲಿ ದರ್ಶನ್ ಮನವಿ ಮಾಡಿದರು. ಜೈಲಿನ ಬಳಿ ಅಭಿಮಾನಿಗಳು ಬರುವುದು ಬೇಡ ಎಂದು ಮನವಿ ಮಾಡಿಕೊಂಡರು. ದರ್ಶನ್ ಗೆಳತಿ ರಕ್ಷಿತಾ ಪ್ರೇಮ್ ದಂಪತಿ ಜೈಲಿಗೆ ಭೇಟಿ ಸಮಾಧಾನ ಹೇಳಿದರು. ದರ್ಶನ್ರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ವಿನೋದ್ ಪ್ರಭಾಕರ್ ಮುಂತಾದವರು ಕೂಡ ಭೇಟಿ ನೀಡಿದರು.
ಕಳೆದ ವಾರ ದರ್ಶನ್ ಅವರ ಇಡೀ ಫ್ಯಾಮಿಲಿ ಜೈಲಿಗೆ ಭೇಟಿ ನೀಡಿತ್ತು. ತಾಯಿ, ತಮ್ಮ, ಪತ್ನಿ, ಸಹೋದರಿ ಎಲ್ಲರೂ ಜೈಲಿಗೆ ಬಂದಿದ್ದರು. ತಾಯಿ ಮೀನಾ ಅವರನ್ನು ನೋಡಿ ದರ್ಶನ್ ಕಣ್ಣೀರು ಹಾಕಿದರು. ಅಣ್ಣನನ್ನು ಅಪ್ಪಿಕೊಂಡು ಸಹೋದರ ದಿನಕರ್ ತೂಗುದೀಪ್ ಧೈರ್ಯ ತುಂಬಿದರು. ಘಟನೆಯ ಬಗ್ಗೆ ಕುಟುಂಬದವರು ಮಾಹಿತಿ ಪಡೆದುಕೊಂಡು, ಕಾನೂನು ಹೋರಾಟದ ಬಗ್ಗೆ ಚರ್ಚೆ ನಡೆಸಿದರು. ಜಾಮೀನಿಗೆ ಅರ್ಜಿ ಸಲ್ಲಿಸುವ ಬಗ್ಗೆ ಅವರು ಸಮಾಲೋಚನೆ ಮಾಡಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.