ದಾವಣಗೆರೆಯಲ್ಲಿ ಹಳ್ಳ ಹಿಡಿದ ‘ಎಸ್ಐಆರ್’ ಪ್ರಕ್ರಿಯೆ: ಮನೆ ಮನೆಗೆ ಹೋಗದೆ ದೇವಸ್ಥಾನ, ಅಂಗನವಾಡಿಯಲ್ಲೇ ಕುಳಿತ ಬಿಎಲ್‌ಓ

Edited By:

Updated on: Jul 04, 2026 | 4:56 PM

ಮುಖ್ಯಾಂಶಗಳು

  • ಜಿಲ್ಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆಯು ಸಂಪೂರ್ಣವಾಗಿ ಹಳ್ಳ ಹಿಡಿದಿದೆ
  • ಬಿಎಲ್‌ಓಗಳು ಬೇಕಾಬಿಟ್ಟಿಯಾಗಿ ಕಾರ್ಯನಿರ್ವಹಿಸುತ್ತಿರುವ ಗಂಭೀರ ಆರೋಪ
  • ಎಸ್‌ಐಆರ್ ಪ್ರಕ್ರಿಯೆ ನಡೆಸುತ್ತಿರುವ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ದಾವಣಗೆರೆ ಜಿಲ್ಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆಯು ಸಂಪೂರ್ಣವಾಗಿ ಹಳ್ಳ ಹಿಡಿದಿದೆ. ಬಿಎಲ್‌ಓಗಳು ನಿಯಮ ಉಲ್ಲಂಘಿಸಿ ಮನೆ ಮನೆಗೆ ತೆರಳದೆ, ಅಂಗನವಾಡಿ ಹಾಗೂ ದೇವಸ್ಥಾನಗಳಲ್ಲಿ ಸಾರ್ವಜನಿಕರನ್ನು ಕಾಯಿಸುತ್ತಿದ್ದಾರೆ. ದಕ್ಷಿಣ ವಿಧಾನಸಭಾ ಕ್ಷೇತ್ರದ ಜಾಲಿನಗರದಲ್ಲಿ ಈ ಅವ್ಯವಹಾರ ಬೆಳಕಿಗೆ ಬಂದಿದ್ದು, ಬಿಎಲ್‌ಓಗಳ ನಿರ್ಲಕ್ಷ್ಯದ ವಿಡಿಯೋಗಳು ವೈರಲ್ ಆಗಿವೆ. ಇದರಿಂದ ವಯೋವೃದ್ಧರು ಮತ್ತು ಮಹಿಳೆಯರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಾವಣಗೆರೆ, ಜು.4: ಜಿಲ್ಲೆಯಲ್ಲಿ ಎಸ್‌ಐಆರ್ (SIR) ಪ್ರಕ್ರಿಯೆಯು ಸಂಪೂರ್ಣವಾಗಿ ಹಳ್ಳ ಹಿಡಿದಿದೆ. ನಿಯಮದ ಪ್ರಕಾರ ಮನೆ ಮನೆಗಳಿಗೆ ತೆರಳಿ ಸಾರ್ವಜನಿಕರಿಂದ ಮಾಹಿತಿ ಹಾಗೂ ಫಾರಂಗಳನ್ನು ಸಂಗ್ರಹಿಸಬೇಕಾದ ಬಿಎಲ್‌ಓಗಳು (BLO – Booth Level Officers), ಬೇಕಾಬಿಟ್ಟಿಯಾಗಿ ಕಾರ್ಯನಿರ್ವಹಿಸುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಎಲ್‌ಓಗಳು ಮನೆಮನೆಗೆ ತೆರಳದೆ, ಅಂಗನವಾಡಿ ಕೇಂದ್ರ ಹಾಗೂ ದೇವಸ್ಥಾನಗಳಲ್ಲಿ ಕುಳಿತುಕೊಂಡೇ ಎಸ್‌ಐಆರ್ ಪ್ರಕ್ರಿಯೆ ನಡೆಸುತ್ತಿರುವ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಜಾಲಿನಗರದ ಬೂತ್ ನಂಬರ್ 49ರಲ್ಲಿ ಈ ಅವಾಂತರ ಬೆಳಕಿಗೆ ಬಂದಿದೆ. ಇಲ್ಲಿನ ಅಂಗನವಾಡಿ ಕೇಂದ್ರ ಮತ್ತು ಸ್ಥಳೀಯ ಕಾಲಭೈರವ ದೇವಸ್ಥಾನದಲ್ಲಿ ಬಿಎಲ್‌ಓಗಳು ಆರಾಮಾಗಿ ಕುಳಿತುಕೊಂಡಿದ್ದಾರೆ. ಸಾರ್ವಜನಿಕರು ತಾವೇ ಖುದ್ದಾಗಿ ದೇವಸ್ಥಾನ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಅಲೆದಾಡಿ ಫಾರಂಗಳನ್ನು ಪಡೆದುಕೊಂಡು ಬರುತ್ತಿರುವ ಆಘಾತಕಾರಿ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕ್ಷೇತ್ರದ ಸಾರ್ವಜನಿಕರು ಬಿಎಲ್‌ಓಗಳಿಗೆ ಫೋನ್ ಮಾಡಿ ನಿಯಮದಂತೆ ಮನೆಗೆ ಬರುವಂತೆ ವಿನಂತಿಸಿದರೆ, ಅದಕ್ಕೆ ಉದ್ಧಟತನದ ಉತ್ತರ ಸಿಗುತ್ತಿದೆ ಎನ್ನಲಾಗಿದೆ. “ನಾವು ಇರುವ ಜಾಗಕ್ಕೇ ಬಂದು ಫಾರಂ ಪಡೆದುಕೊಳ್ಳಿ ಮತ್ತು ಸಬ್ಮಿಟ್ ಮಾಡಿ” ಎಂದು ಬಿಎಲ್‌ಓಗಳು ಸಾರ್ವಜನಿಕರಿಗೆ ಸೂಚಿಸುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ. ಇದರಿಂದಾಗಿ ವಯೋವೃದ್ಧರು ಮತ್ತು ಮಹಿಳೆಯರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More