ಊರ ತುಂಬೆಲ್ಲ ಕುಂಕುಮ-ನಿಂಬೆಹಣ್ಣು, ಜಾನುವಾರುಗಳ ಆಕಸ್ಮಿಕ ಸಾವು: ವಾಮಾಚಾರದ ಆತಂಕದಲ್ಲಿ ದಾವಣಗೆರೆಯ ಹೂವಿನಮಡು ಜನ
ಅಮಾವಾಸ್ಯೆ-ಹುಣ್ಣಿಮೆ ಬಂದರೆ ಆ ಊರಲ್ಲಿ ಬರೀ ಕೆಟ್ಟದ್ದೇ ಆಗುತ್ತಿವೆಯಂತೆ. ಜನ ಅನಾರೋಗ್ಯಕ್ಕೀಡಾಗುತ್ತಿದ್ದಾರಂತೆ. ಜಾನುವಾರುಗಳು ಇದ್ದಕ್ಕಿದ್ದಂತೆ ಸಾಯುತ್ತಿವೆ. ಅದಕ್ಕೆ ಕಾರಣ ವಾಮಾಚಾರ ಎನ್ನಲಾಗಿದೆ. ದಾವಣಗೆರೆ ಜಿಲ್ಲೆಯ ಹೂವಿನಮಡುವಿನಲ್ಲಿ ಈಗ ಊರು.. ಊಣಿ, ಹೊಲ, ಎಲ್ಲೆಲ್ಲೂ ಕುಂಕುಮ ಬಳಿದ ನಿಂಬೆಗಳು ಕಾಣಿಸಿದ್ದು ಜನರ ನಿದ್ದೆಗೆಡಿಸಿವೆ. ಈ ಊರಲ್ಲೀಗ ಭಯ ಆವರಿಸಿದೆ.
ದಾವಣಗೆರೆ, ನವೆಂಬರ್ 7: ದಾವಣಗೆರೆ ಜಿಲ್ಲೆಯ ಹೂವಿನಮಡು ಗ್ರಾಮದಲ್ಲಿ ಅಮವಾಸ್ಯೆ ಹಾಗೂ ಹುಣ್ಣಿಮೆ ಬಂದರೆ ಯಾರೂ ಕೂಡ ಮನೆಯಿಂದ ಹೊರ ಬರುತ್ತಿಲ್ಲ. ಕಳೆದೊಂದು ವರ್ಷದಿಂದ ಹತ್ತಕ್ಕೂ ಹೆಚ್ಚು ಮನೆಗಳ ಮುಂದೆ ಮಂತ್ರಿಸಿದ ನಿಂಬೆಹಣ್ಣು ಇಡಲಾಗಿದೆ. ಕಾರು, ಬೈಕ್ ಹಾಗೂ ಟ್ರ್ಯಾಕ್ಟರ್‌ಗಳ ಕೆಳಗೆ ವಾಮಾಚಾರ ಮಾಡಲಾಗುತ್ತಿದೆ ಎಬಂಬ ಆರೋಪ ಕೇಳಿಬಂದಿದೆ. ಅಮವಾಸ್ಯೆ- ಹುಣ್ಣಿಮೆಗೆ ಕೆಲವರ ಮನೆಯಲ್ಲಿ ಜನ ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ಕೌಟುಂಬಿಕ ಕಲಹ ಹೆಚ್ಚಾಗುತ್ತಿವೆ ಎನ್ನಲಾಗಿದೆ.
ಬುದ್ಧವಾರ ಹುಣ್ಣಿಮೆ ಇತ್ತು. ಹೀಗಾಗಿ ವಾಮಾಚಾರ ಮಾಡುವವರನ್ನು ಪತ್ತೆ ಹಚ್ಚಲು ಕೆಲ ಯವಕರು ರಾತ್ರಿಯಿಡೀ ಕಾದಿದ್ದರು. ಈ ವೇಳೆ ಗ್ರಾಮದ ರಾಜಪ್ಪ ಎಂಬಾತ ಈ ಕೃತ್ಯ ಎಸೆಗುತ್ತಿರುವುದನ್ನು ನೋಡಿದ್ದಾಗಿ ಜನರು ಆರೋಪಿಸಿದ್ದಾರೆ. ಕೆಲವರ ಜತೆ ಜಮೀನು ವಿವಾದವಿದ್ದು, ಇದರಿಂದಾಗಿ ರಾಜಪ್ಪ ಹೀಗೆ ಮಾಡುತ್ತಿದ್ದಾನೆಂದು ಜನ ಆರೋಪಿಸಿದ್ದಾರೆ. ಈ ಬಗ್ಗೆ ಸಾಕ್ಷ್ಯಾಧಾರಗಳೊಂದಿಗೆ ಹದಡಿ ಪೊಲೀಸರಿಗೂ ದೂರು ನೀಡಿದ್ದಾರೆ.
‘ಮಾಟ-ಮಂತ್ರದಿಂದ ಕಾಪಾಡಪ್ಪ ಭಗವಂತಾ’ ಎಂದು ಜನ ಸಿಕ್ಕ ಸಿಕ್ಕ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಪೊಲೀಸರು ಆರೋಪಿಯನ್ನ ಪತ್ತೆ ಹಚ್ಚಿ ಕ್ರಮಕೈಗೊಳ್ಳಬೇಕಿದೆ.
