ಡಿಕೆ ಶಿವಕುಮಾರ್ ನಡೆಸುವ ಜನಸ್ಪಂದನಾ ಕಾರ್ಯಕ್ರಮ ಅನಿಲ್ ಕಪೂರ್ ಅಭಿನಯದ ‘ನಾಯಕ್’ ಚಿತ್ರವನ್ನು ನೆನಪಿಸುತ್ತದೆ!
ಸರ್ಕಾರೀ ಕಚೇರಿಗಳಲ್ಲಿ ಎಲ್ಲ ಕೆಲಸಗಳು ಆಮೆವೇಗದಲ್ಲಿ ಸಾಗುತ್ತವೆ. ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಕೆಲ ಅಧಿಕಾರಿಗಳು ಆಫೀಸಿಗೂ ಬರಲ್ಲ. ಕ್ಲರ್ಕ್ ಗಳು ಅವರ ಮನೆಗಳಿಗೆ ಫೈಲುಗಳನ್ನು ಹೊತ್ತೊಯ್ದು ಸಹಿ ಮಾಡಿಸಿಕೊಂಡು ಬರುತ್ತಾರೆ. ಯಾವ ಅರ್ಜಿಗೆ ಎಷ್ಟು ವಸೂಲು ಮಾಡಬೇಕು ಅಂತ ಗುಮಾಸ್ತರಿಗೆ ಸ್ಟ್ಯಾಂಡಿಂಗ್ ಇನ್ಸ್ಟ್ರಕ್ಷನ್ ಗಳಿರುತ್ತವೆ. ಸರ್ಕಾರ ಇದನ್ನೆಲ್ಲ ಸರಿಮಾಡೀತೇ?
ಬೆಂಗಳೂರು: ಬೊಮ್ಮನಹಳ್ಳಿ ವಲಯದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ (DK Shivakumar) ನಡೆಸುತ್ತಿರುವ ಜನಸ್ಪಂದನಾ ಕಾರ್ಯಕ್ರಮದ (Janaspandana Programme ) ಹಾಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಜಿಲ್ಲೆಗಳ ಪ್ರತಿ ತಾಲ್ಲೂಕು ಮತ್ತು ಹೋಬಳಿಗಳಲ್ಲಿ ವಾರಕ್ಕೊಮ್ಮೆ ಮಾಡಿದರೆ ಸರ್ಕಾರೀ ಕಚೇರಿಗಳಲ್ಲಿ ತಾಂಡವಾಡುವ ಭ್ರಷ್ಟಾಚಾರವನ್ನು ಒಂದು ಮಟ್ಟಕ್ಕೆ ಕಡಿಮೆ ಮಾಡಬಹುದು ಅನಿಸುತ್ತೆ. ಇಲ್ಲೊಬ್ಬ ಮಹಿಳೆ ತನ್ನ ವಿಧವಾ ವೇತನ ಪಡೆದುಕೊಳ್ಳುವುದಕ್ಕೆ ಪಡುವ ಪಡಿಪಾಟಲನ್ನು ಶಿವಕುಮಾರ್ ಅವರ ಗಮನಕ್ಕೆ ತಂದಿದ್ದಾರೆ. ಬನಶಂಕರಿಯ ತಾಲ್ಲೂಕು ಆಫೀಸಲ್ಲಿ ತಹಸೀಲ್ದಾರನಾಗಿ ಕೆಲಸ ಮಾಡುವ ರಮೇಶ್ ಹೆಸರಿನ ಲಂಚಕೋರ ವಿಧವಾ ವೇತನ ಮಂಜೂರು ಮಾಡಲು 4,000 ರೂ. ಕೇಳುತ್ತಾನಂತೆ. ಮಹಿಳೆಯ ದೂರು ಕೇಳಿದ ಕೂಡಲೇ ಉರಿದು ಬೀಳುವ ಉಪ ಮುಖ್ಯಮಂತ್ರಿ ಅವನನ್ನು ಕರೆಸಿ ಅಂತ ಅಧಿಕಾರಿಗಳಿಗೆ ಹೇಳುತ್ತಾರೆ. ಆದರೆ ತಹಸೀಲ್ದಾರ್ ಸ್ಥಳದಲ್ಲಿ ಯಾಕಿದ್ದಾನು? ಅವನು ಬರುವ ಲಕ್ಷಣ ಕಾಣದಾದಾಗ ಶಿವಕುಮಾರ್ ಒಬ್ಬ ಮಹಿಳಾ ಅಧಿಕಾರಿಯನ್ನು ಕರೆದು, ತಹಸೀಲ್ದಾರ್ ರಮೇಶ್ ನನ್ನು ಸಸ್ಪೆಂಡ್ ಮಾಡುವಂತೆ ಆದೇಶಿಸುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ