ಬುರುಡೆ ಗ್ಯಾಂಗ್ ಜತೆ ಹೋಗಿ ತಪ್ಪು ಮಾಡಿದೆ, ವೀರೇಂದ್ರ ಹೆಗ್ಗಡೆಯವರ ಕ್ಷಮೆ ಕೇಳುವೆ: ಸುಜಾತ ಭಟ್
ಸುಜಾತಾ ಭಟ್ ಅವರು ಧರ್ಮಸ್ಥಳ ಪ್ರಕರಣದಲ್ಲಿ ಬುರುಡೆ ಗ್ಯಾಂಗ್ ಜೊತೆ ಸೇರಿಕೊಂಡಿದ್ದಕ್ಕೆ ತೀವ್ರ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ. ತಮ್ಮ 60 ವರ್ಷಗಳ ಜೀವನದಲ್ಲಿ ಇದು ಮೊದಲ ಕಪ್ಪು ಚುಕ್ಕೆ ಎಂದು ಹೇಳಿರುವ ಅವರು, ಶ್ರೀ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಕ್ಷಮೆ ಯಾಚಿಸಲು ನಿರ್ಧರಿಸಿದ್ದಾರೆ. ತಮ್ಮ ಜೀವನವನ್ನು ಮತ್ತೆ ರೂಪಿಸಿಕೊಳ್ಳುವ ಬಗ್ಗೆಯೂ ಅವರು ಮಾತನಾಡಿದ್ದಾರೆ.
ಬೆಂಗಳೂರು, ಅಕ್ಟೋಬರ್ 7: ಧರ್ಮಸ್ಥಳ ಪ್ರಕರಣದ ಸಂಬಂಧ ಬುರುಡೆ ಗ್ಯಾಂಗ್ ಜೊತೆ ಸೇರಿಕೊಂಡಿದ್ದಕ್ಕೆ ತೀವ್ರ ಪಶ್ಚಾತ್ತಾಪವಿದೆ ಎಂದು ಸುಜಾತಾ ಭಟ್ ಹೇಳಿದ್ದಾರೆ. ಈ ಕುರಿತು ‘ಟಿವಿ9’ ಜತೆ ಮಾತನಾಡಿದ ಅವರು, ಯಾರದ್ದೋ ಮಾತು ಕೇಳಿ ತಮ್ಮ ಜೀವನ ಹಾಳು ಮಾಡಿಕೊಳ್ಳಲು ಇಚ್ಛಿಸುವುದಿಲ್ಲ ಎಂದಿದ್ದಾರೆ. ಮುಂದಿನ ವಾರ ಧರ್ಮಸ್ಥಳಕ್ಕೆ ತೆರಳಿ ಶ್ರೀ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಕ್ಷಮೆ ಯಾಚಿಸುವುದಾಗಿ ಭಟ್ ತಿಳಿಸಿದ್ದಾರೆ. ತಮ್ಮ 60 ವರ್ಷಗಳ ಜೀವನದಲ್ಲಿ ಇದುವರೆಗೆ ಯಾವುದೇ ಕಪ್ಪು ಚುಕ್ಕೆ ಬಂದಿರಲಿಲ್ಲ, ಆದರೆ ಬುರುಡೆ ಗ್ಯಾಂಗ್ ಜೊತೆಗಿನ ಸಹವಾಸದಿಂದ ತಮಗೆ ದೊಡ್ಡ ಪಶ್ಚಾತ್ತಾಪವಾಗಿದೆ ಎಂದಿದ್ದಾರೆ. ಈ ವಿಚಾರದಲ್ಲಿ ತಮ್ಮೊಂದಿಗೆ ಇದ್ದ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಮಟ್ಟಣ್ಣವರ್ ಸೇರಿದಂತೆ ಯಾರೂ ಈಗ ತಮ್ಮ ಸಂಪರ್ಕದಲ್ಲಿಲ್ಲ ಎಂದು ಸುಜಾತಾ ಭಟ್ ಸ್ಪಷ್ಟಪಡಿಸಿದ್ದಾರೆ. ವೈಯಕ್ತಿಕ ಜೀವನದ ಮೇಲೆ ಇದು ಪರಿಣಾಮ ಬೀರಿದ್ದು, ತಮ್ಮ ಪಾಡಿಗೆ ತಾವು ಬದುಕಲು ಬಯಸುವುದಾಗಿ ತಿಳಿಸಿದ್ದಾರೆ. ಬಿಗ್‌ಬಾಸ್‌ಗೆ ಆಹ್ವಾನ ದೊರೆತರೆ ಭಾಗವಹಿಸಲು ಸಿದ್ಧರಿರುವುದಾಗಿಯೂ ಅವರು ಹೇಳಿದ್ದಾರೆ.
