ಧರ್ಮಸ್ಥಳ ಪ್ರಕರಣ: ಈವರೆಗೆ ಪತ್ತೆಯಾದ ಬುರುಡೆ, ಮೂಳೆಗಳು ಯಾರದ್ದು?
ಧರ್ಮಸ್ಥಳದ ಸಮೀಪ ನೂರಾರು ಶವಗಳನ್ನು ಹೂತಿಡಲಾಗಿದೆ ಎಂಬ ಪ್ರಕರಣ ಸಂಬಂಧ ದೊರೆತ ಬುರುಡೆ ಮತ್ತು ಮೂಳೆಗಳ ಗುರುತಿನ ಕುರಿತು ಎಫ್ಎಸ್ಎಲ್ ವರದಿ ಸ್ಪಷ್ಟವಾಗಿದೆ. ಪ್ರಾಥಮಿಕವಾಗಿ ಪರೀಕ್ಷೆಗೆ ಕಳುಹಿಸಲಾದ ಮೂರು ಬುರುಡೆಗಳು ಪುರುಷರಿಗೆ ಸೇರಿವೆ ಎಂದು ವರದಿ ದೃಢಪಡಿಸಿದೆ. ಇವುಗಳ ಮೇಲೆ ಯಾವುದೇ ಹಲ್ಲೆಯ ಗುರುತುಗಳು ಕಂಡುಬಂದಿಲ್ಲ ಎನ್ನಲಾಗಿದೆ.
ಮಂಗಳೂರು, ಸೆಪ್ಟೆಂಬರ್ 1: ಧರ್ಮಸ್ಥಳ ಆಸುಪಾಸಿನಲ್ಲಿ ನೂರಾರು ಶವಗಳನ್ನು ಹೂಳಲಾಗಿತ್ತು ಎಂಬ ಆರೋಪದ ಬಗ್ಗೆ, ಅಲ್ಲಿ ದೊರೆತ ಬುರುಡೆ ಮತ್ತು ಮೂಳೆಗಳ ಗುರುತು ಕುರಿತು ಪತ್ತೆ ಸಂಬಂಧ ತನಿಖೆ ಮುಂದುವರಿದಿದೆ. ಈ ಹಿಂದೆ, ಮಹಿಳೆಯರು ಮತ್ತು ಯುವತಿಯರ ಶವಗಳನ್ನು ಹೂತುಹಾಕಲಾಗಿದೆ ಎಂಬ ಆರೋಪವಿತ್ತು. ಆದರೆ, ವಿಶೇಷ ತನಿಖಾ ದಳ (ಎಸ್ಐಟಿ) ಬೆಳ್ತಂಗಡಿ ನ್ಯಾಯಾಲಯದಲ್ಲಿ ಹಾಜರುಪಡಿಸಿದ ಒಂದು ಬುರುಡೆ, ಸ್ಪಾಟ್ ನಂಬರ್ 6ರಲ್ಲಿ ದೊರೆತ ಇನ್ನೊಂದು ಮತ್ತು ಸ್ಪಾಟ್ ನಂಬರ್ 15ರ ಬಳಿ ಪತ್ತೆಯಾದ ಮೂರನೇ ಬುರುಡೆ ಸೇರಿದಂತೆ ಒಟ್ಟು ಮೂರು ಬುರುಡೆಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್ಎಲ್) ಕಳುಹಿಸಲಾಗಿತ್ತು. ಎಫ್ಎಸ್ಎಲ್ ವರದಿಯು ಈ ಮೂರು ಬುರುಡೆಗಳು ಪುರುಷರಿಗೆ ಸೇರಿವೆ ಎಂಬುದನ್ನು ದೃಢಪಡಿಸಿದೆ. ಅವುಗಳ ವಯಸ್ಸು ಸುಮಾರು 25ರಿಂದ 39 ವರ್ಷಗಳ ನಡುವೆ ಇದ್ದಿರಬಹುದು ಎಂದು ತಿಳಿಸಿದೆ. ಈ ಬುರುಡೆಗಳ ಮೇಲೆ ಯಾವುದೇ ರೀತಿಯ ಹಲ್ಲೆಯ ಗುರುತುಗಳು ಕಂಡುಬಂದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆದರೆ, ನಂತರ ದೊರೆತ ಏಳು ಬುರುಡೆಗಳನ್ನು ಇನ್ನೂ ಎಫ್ಎಸ್ಎಲ್ ಪರೀಕ್ಷೆಗೆ ಕಳುಹಿಸಿಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದೆ. ಈ ಪ್ರಕರಣವನ್ನು ಧರ್ಮಸ್ಥಳದ ವಿರುದ್ಧದ ಷಡ್ಯಂತ್ರದ ಭಾಗವಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
