ನನ್ನ ಪ್ರಕಾರ.. ರೋಹಿತ್, ಕೊಹ್ಲಿ ಏಕದಿನ ವಿಶ್ವಕಪ್ ಆಡುವ ಬಗ್ಗೆ ಮೌನ ಮುರಿದ ಧೋನಿ
Dhoni Backs Kohli, Rohit for 2027 ODI World Cup: 2027ರ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಭಾಗವಹಿಸುವ ಬಗ್ಗೆ ಮಾಜಿ ನಾಯಕ ಎಂಎಸ್ ಧೋನಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಯಸ್ಸು ಮಾನದಂಡವಲ್ಲ, ಪ್ರದರ್ಶನ ಮತ್ತು ಫಿಟ್‌ನೆಸ್ ಮುಖ್ಯ. ದೊಡ್ಡ ಪಂದ್ಯಗಳಲ್ಲಿ ಅನುಭವ ನಿರ್ಣಾಯಕ ಎಂದು ಧೋನಿ ಹೇಳಿದ್ದಾರೆ. ಇವರಿಬ್ಬರು ಆಡುವುದಕ್ಕೆ ನನಗೆ ಆಕ್ಷೇಪವಿಲ್ಲ ಎಂದು ಸ್ಪಷ್ಟಪಡಿಸಿದ್ದು, ಟೀಂ ಇಂಡಿಯಾ ಅಭಿಮಾನಿಗಳಲ್ಲಿ ಭರವಸೆ ಮೂಡಿಸಿದೆ.
ಪ್ರಸ್ತುತ 2026 ರ ಟಿ20 ವಿಶ್ವಕಪ್ ಆಡುತ್ತಿರುವ ಟೀಂ ಇಂಡಿಯಾ ಸತತ ಎರಡನೇ ಬಾರಿಗೆ ಟ್ರೋಫಿ ಎತ್ತಿಹಿಡಿಯುವ ಇರಾದೆಯಲ್ಲಿದೆ. ಈ ವರ್ಷ ಟಿ20 ವಿಶ್ವಕಪ್ ನಡೆದರೆ, ಮುಂದಿನ ವರ್ಷ ಅಂದರೆ 2027 ರಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ. 2023 ರಲ್ಲಿ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಭಾರತ ಎಡವಿತ್ತು. ಆದರೆ 2027 ರಲ್ಲಿ ಏಕದಿನ ವಿಶ್ವಕಪ್ ಟ್ರೋಫಿ ಬರವನ್ನು ನೀಗಿಸಿಕೊಳ್ಳುವ ಗುರಿಯಲ್ಲಿ ಟೀಂ ಇಂಡಿಯಾವಿದೆ. ಆದರೆ ಈ ಟೂರ್ನಿಗೆ ಭಾರತ ತಂಡ ಹೇಗಿರಲಿದೆ ಎಂಬುದು ಪ್ರಮುಖ ಪ್ರಶ್ನೆಯಾಗಿದೆ. ಅದರಲ್ಲೂ ಅನುಭವಿಗಳಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ತಂಡದಲ್ಲಿರುತ್ತಾರಾ ಎಂಬುದು ಪ್ರಸ್ತುತ ಟೀಂ ಇಂಡಿಯಾ ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.
ಈ ಪ್ರಶ್ನೆಗೆ ಈಗಾಗಲೇ ಸಾಕಷ್ಟು ಅನುಭವಿಗಳು ಉತ್ತರ ನೀಡಿದ್ದು, ರೋಹಿತ್, ಕೊಹ್ಲಿ ಆಡುವುದು ಖಚಿತ ಎಂದಿದ್ದಾರೆ. ಆದರೆ ಬಿಸಿಸಿಐ ಮಾತ್ರ ಈ ಪ್ರಶ್ನೆಗೆ ಇದುವರೆಗೆ ಖಚಿತ ಉತ್ತರ ನೀಡಿಲ್ಲ. ಆದಾಗ್ಯೂ ಬಿಸಿಸಿಐ ಪ್ರತಿಯೊಂದು ಏಕದಿನ ಸರಣಿಯಲ್ಲಿ ಇವರಿಬ್ಬರಿಗೆ ಅವಕಾಶ ನೀಡುತ್ತಿರುವುದರನ್ನು ಗಮನಿಸಿದರೆ, ಇವರಿಬ್ಬರು ಆಡುವುದು ಪಕ್ಕಾ ಎನ್ನಬಹುದು. ಇದೀಗ ಈ ಪ್ರಶ್ನೆಗೆ ತಂಡದ ಮಾಜಿ ನಾಯಕ ಎಂಎಸ್ ಧೋನಿ ಕೂಡ ತಮ್ಮ ಉತ್ತರವನ್ನು ನೀಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಧೋನಿ ಬಳಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ 2027 ರ ಏಕದಿನ ವಿಶ್ವಕಪ್‌ನಲ್ಲಿ ಆಡುತ್ತಾರಾ ಎಂಬ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಧೋನಿ, ‘ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ 2027 ರ ಏಕದಿನ ವಿಶ್ವಕಪ್‌ನಲ್ಲಿ ಏಕೆ ಆಡಬಾರದು?’. ನನ್ನ ಅಭಿಪ್ರಾಯದಲ್ಲಿ, ಆಟಕ್ಕೆ ವಯಸ್ಸು ಮಾನದಂಡವಲ್ಲ. ಆದರೆ ಪ್ರದರ್ಶನ ಮತ್ತು ಫಿಟ್‌ನೆಸ್ ಮುಖ್ಯವಾಗುತ್ತದೆ. ಅವರು 30 ವರ್ಷಕ್ಕಿಂತ ಮೇಲ್ಪಟ್ಟವರು ಎಂದ ಮಾತ್ರಕ್ಕೆ ಅವರು ಆಡಲು ಸಾಧ್ಯವಿಲ್ಲ ಎಂದು ಅರ್ಥವಲ್ಲ. ದೊಡ್ಡ ಪಂದ್ಯಗಳಲ್ಲಿ ಅನುಭವ ಯಾವಾಗಲೂ ಮುಖ್ಯ. ಆದ್ದರಿಂದ ವಿರಾಟ್ ಮತ್ತು ರೋಹಿತ್ 2027 ರ ವಿಶ್ವಕಪ್ ಆಡುವುದಕ್ಕೆ ನನಗೆ ಯಾವುದೇ ಆಕ್ಷೇಪವಿಲ್ಲ ಎಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ