ಡಿವೋರ್ಸ್ ಬದುಕಿನ ಅಂತ್ಯವಲ್ಲ, ಅದು ಹೊಸ ಬದುಕಿಗೆ ತೆರೆದುಕೊಳ್ಳುವ ಸ್ಥಿತಿ ಎನ್ನತ್ತಾರೆ ಡಾ ಸೌಜನ್ಯ ವಶಿಷ್ಠ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 29, 2021 | 12:16 AM

ಸಂಗಾತಿ ಜೊತೆ ಇನ್ನು ಜೊತೆಯಾಗಿ ಬದುಕುವುದು ಸಾಧ್ಯವೇ ಇಲ್ಲ ಎಂಬ ಸ್ಥಿತಿ ತಲುಪುವಷ್ಟು ಸಂಬಂಧ ಹಳಸಿದಾಗ ಒಂದು ಹೆಣ್ಣು ತನ್ನ ಸ್ವಾಭಿಮಾನದ ಜೊತೆಗೆ ರಾಜಿ ಮಾಡಿಕೊಳ್ಳಲಾರಳು.

ಖ್ಯಾತ ಮನಶಾಸ್ತ್ರಜ್ಞೆ ಡಾ ಸೌಜನ್ಯ ವಶಿಷ್ಠ ಅವರು ವಿವಾಹ ವಿಚ್ಚೇದನ ನಂತರ ಜನ ಯಾಕೆ ಖಿನ್ನತೆಗೊಳಗಾಗುತ್ತಾರೆ ಮತ್ತು ಅದರಿಂದ ಆಚೆ ಬರೋದು ಹೇಗೆ ಅನ್ನುವುದನ್ನು ವಿವರಿಸಿದ್ದಾರೆ. ಡಿವೋರ್ಸ್ ಹೆಣ್ಣಿಗಾಗಲಿ ಅಥವಾ ಗಂಡು- ಇಬ್ಬರನ್ನು ಕಾಡುವಂಥ ಒಂದು ಸ್ಥಿತಿಯಾಗಿದೆ. ಆದರೆ, ಜಾಸ್ತಿ ನೋವು, ಅವಮಾನ, ಮಾನಸಿಕ ಹಿಂಸೆ, ಕಿರಿಕಿರಿ ಮತ್ತು ಎಲ್ಲಕ್ಕೂ ಮಿಗಿಲಾಗಿ ಸಮಾಜದ ಕುಹುಕ ಅನುಭವಿಸೋದು ಮಾತ್ರ ಹೆಣ್ಣೇ. ಸಂಬಂಧಿಕರು, ನೆರೆಹೊರೆಯವರು, ಸಹೋದ್ಯೋಗಿಗಳು-ಎಲ್ಲರೂ ಅಪಹಾಸ್ಯ ಮಾಡುತ್ತಾರೆ, ಹೀಯಾಳಿಸುತ್ತಾರೆ. ಜನರು ಆಕೆಯನ್ನು ನೋಡುವ ದೃಷ್ಟಿ ಬದಲಾಗುತ್ತದೆ. ಆಕೆ ಯಾವ ಪರಿ ನೋವು, ಯಾತನೆ, ಅನುಭವಿಸುತ್ತಿದ್ದಾಳೆ ಅಂತ ಯೋಚಿಸುವವರು ಬಹಳ ಕಡಿಮೆ ಎಂದು ಸೌಜನ್ಯ ಹೇಳುತ್ತಾರೆ. ಕೆಟ್ಟ ಮದುವೆ, ಕೆಟ್ಟ ಸಂಬಂಧ ಯಾವತ್ತಿಗೂ ಕೆಟ್ಟ ಅನುಭವವೇ. ಗಂಡನೊಂದಿಗೆ ಇರುವಷ್ಟು ದಿನ ಅವನೊಂದಿಗೆ ಎಲ್ಲವನ್ನೂ ಹಂಚಿಕೊಂಡು ವಿಚ್ಛೇದನ ಬಳಿಕ ಅದನ್ನೆಲ್ಲ ಮರೆಯುವುದು ಹೆಣ್ಣಿಗೆ ಸುಲಭವಲ್ಲ.

ನಾವು ಚಿಕ್ಕಂದಿನಿಂದಲೂ ಭಾವನೆಗಳನ್ನು ನಮ್ಮ ಮನಸ್ಸಿನಲ್ಲಿ, ಹೃದಯದಲ್ಲಿ ಶೇಖರಿಸಿಕೊಳ್ಳುತ್ತಾ ಹೋಗುತ್ತೇವೆ. ಅವುಗಳನ್ನು ಹೊರ ಹಾಕುವುದು ಕಲಿತಿರುವುದಿಲ್ಲ. ಗಂಡನ ಜೊತೆ ಕಳೆದ ದಿನಗಳು ನೆನಪಾಗಿ ಕಾಡುತ್ತವೆ, ಅವುಗಳನ್ನು ಮರೆಯೋದು ಅಷ್ಟು ಸುಲಭವಲ್ಲ. ಹಾಗಾಗೇ ಡಿವೋರ್ಸ್ನಂಥ ಪ್ರಕರಣಗಳಲ್ಲಿ ಮಹಿಳೆಯರು ತುಂಬಾ ಸಂಕಟಪಡುತ್ತಾರೆ ಎಂದು ಡಾ ಸೌಜನ್ಯ ಹೇಳುತ್ತಾರೆ.

ಭಾವನೆಗಳನ್ನು ಹೊರಹಾಕುವುದು ನಾವು ಕಲಿಯಬೇಕು ಎಂದು ಅವರು ಹೇಳುತ್ತಾರೆ.
ಒಂದು ಅಸಫಲ ಸಂಬಂಧ ನಮ್ಮ ವ್ಯಕ್ತಿತ್ವವನ್ನು ವ್ಯಾಖ್ಯಾನಿಸಲಾರದು ಎನ್ನುವುದನ್ನು ನಾವು ಮನಗಾಣಬೇಕು. ಬದುಕು ಅಲ್ಲಿಗೆ ಕೊನೆಗೊಳ್ಳುವುದಿಲ್ಲ. ಡಿವೋರ್ಸ್ ನಂತರವೂ ಅದು ಮುಂದುವರಿಯುತ್ತದೆ. Divorce is not an end but a new beginning ಅಂತ ಹೇಳಿಕೊಂಡು ಮುಂದುವರಿಯಬೇಕು. ಮನಸ್ಸು ಗಟ್ಟಿಮಾಡಿಕೊಂಡು, ಹಳೆಯದನ್ನೆಲ್ಲ ಮರೆತು ಹೊಸದಾಗಿ ಬದುಕು ಅರಂಭಿಸಬೇಕು ಎಂದು ಡಾ ಸೌಜನ್ಯ ಹೇಳುತ್ತಾರೆ.

ಹೊಸ ನೆನಪುಗಳು ಬಂದಾಗ ಹಳೆ ನೆನಪುಗಳು ತಾವಾಗಿಯೇ ನೇಪಥ್ಯಕ್ಕೆ ಸರಿಯುತ್ತವೆ. Time heals everything ಅಂತ ಅವರು ಹೇಳುತ್ತಾರೆ.

ಸಂಗಾತಿ ಜೊತೆ ಇನ್ನು ಜೊತೆಯಾಗಿ ಬದುಕುವುದು ಸಾಧ್ಯವೇ ಇಲ್ಲ ಎಂಬ ಸ್ಥಿತಿ ತಲುಪುವಷ್ಟು ಸಂಬಂಧ ಹಳಸಿದಾಗ ಒಂದು ಹೆಣ್ಣು ತನ್ನ ಸ್ವಾಭಿಮಾನದ ಜೊತೆಗೆ ರಾಜಿ ಮಾಡಿಕೊಳ್ಳಲಾರಳು. ಆಕೆ ಅನಿವಾರ್ಯವಾಗಿ ಮದುವೆಯ ಬಂಧನವನ್ನು ತೊಡೆದುಹಾಕಿ ಆಚೆ ಬರುತ್ತಾಳೆ. ಇಲ್ಲಿ ಆಕೆಯ ಧೈರ್ಯವನ್ನು ಸಮಾಜ ಮೆಚ್ಚಬೇಕೇ ಹೊರತು ಕುಹುಕವಾಡಬಾರದು. ಆಕೆಗೆ ಹೊಸ ಬದುಕು ಆರಂಭಿಸಲು ಎಲ್ಲರೂ ಸಹಕರಿಸಬೇಕು ಅಂತ ಡಾ ಸೌಜನ್ಯ ಹೇಳುತ್ತಾರೆ.

ಇದನ್ನೂ ಓದಿ: ‘ನಾಯಿ ತೆವಳುತ್ತಿದೆ, ಪಾಪ’ ಎಂದವರನ್ನು ಬೇಸ್ತು ಬೀಳಿಸಿದ ಶ್ವಾನ; ಇದಕ್ಕೆ ಆಸ್ಕರ್ ಕೊಡಬೇಕು ಎಂದ ನೆಟ್ಟಿಗರು: ವಿಡಿಯೊ ನೋಡಿ