ಡಿಕೆ ಶಿವಕುಮಾರ್ ಯಾವಾಗ ಬೇಕಾದರೂ ಸಿಎಂ ಆಗಬಹುದು: ರವಿ ಗಣಿಗ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು ಎಂಬುದು ನನ್ನ ಮನದ ಆಸೆ ಎಂದು ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ಹೇಳಿದ್ದಾರೆ. ಪಕ್ಷದಲ್ಲಿ ಯಾವುದೇ ಬಣಗಳಿಲ್ಲ, 140 ಶಾಸಕರು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರ ಪರವಾಗಿಯೂ ಇದ್ದಾರೆ. ಮುಖ್ಯಮಂತ್ರಿ ಆಯ್ಕೆ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು, ನವೆಂಬರ್ 22: ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು ಎಂಬುದು ತಮ್ಮ ಮನದ ಆಸೆ ಎಂದು ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಯಾವಾಗ ಬೇಕಾದರೂ ಸಿಎಂ ಆಗಬಹುದು ಎಂದಿದ್ದಾರೆ. ಆದರೆ, ಇದೊಂದು ಹೈಕಮಾಂಡ್ ನಿರ್ಧಾರವಾಗಿದ್ದು, ಸೂಕ್ತ ಸಮಯ ಬಂದಾಗ ಅದು ನಡೆಯಲಿದೆ ಎಂದು ತಿಳಿಸಿದ್ದಾರೆ. ಪಕ್ಷದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬಣಗಳಿಲ್ಲ. 140 ಶಾಸಕರು ಇಬ್ಬರೂ ನಾಯಕರ ಪರವಾಗಿಯೂ ಇದ್ದಾರೆ. ಸಿದ್ದರಾಮಯ್ಯ ಅವರು ಪ್ರಸ್ತುತ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಜನರಿಗೆ ನೀಡಿದ ಗ್ಯಾರಂಟಿಗಳನ್ನು ಈಡೇರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡರೂ, ಅದಕ್ಕೆ ಪಕ್ಷದ ಎಲ್ಲರೂ ಬದ್ಧರಾಗಿರುತ್ತಾರೆ. ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರೂ ಪಕ್ಷಕ್ಕಾಗಿ ತ್ಯಾಗ ಮಾಡಿದ್ದಾರೆ ಮತ್ತು ಹೋರಾಟ ನಡೆಸಿದ್ದಾರೆ ಎಂದು ರವಿಕುಮಾರ್ ಗಣಿಗ ತಿಳಿಸಿದ್ದಾರೆ.
