DK Shivakumar: ನೇಪಾಳ ಪ್ರವಾಹದಲ್ಲಿ ಸಿಲುಕಿರೋ ಕನ್ನಡಿಗರಿಗೆ ಧೈರ್ಯ ತುಂಬಿದ ಸಿಎಂ

Updated on: Aug 29, 2026 | 11:24 AM

ನೇಪಾಳದಲ್ಲಿ ಉಂಟಾದ ಪ್ರವಾಹ ಮತ್ತು ಭೂಕುಸಿತದಿಂದಾಗಿ ಕೈಲಾಸ ಯಾತ್ರೆ ಮುಗಿಸಿ ದಾರ್ಚೆನ್‌ನಲ್ಲಿ ಸಿಲುಕಿದ ಕನ್ನಡಿಗರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧೈರ್ಯ ತುಂಬಿದರು. ಕರ್ನಾಟಕ ಭವನದ ಮೂಲಕ ನೆರವು ನೀಡುವ ಭರವಸೆ ನೀಡಿದ ಅವರು, ಯಾತ್ರಾರ್ಥಿಗಳು ಧೈರ್ಯ ಕಳೆದುಕೊಳ್ಳಬಾರದು ಎಂದು ಮನವಿ ಮಾಡಿದರು. ರಸ್ತೆಯ ಸ್ಥಿತಿ ಗಂಭೀರವಾಗಿದ್ದು, ವಿಮಾನಯಾನದ ಮೂಲಕ ಸ್ಥಳಾಂತರಕ್ಕೆ ಮನವಿ ಮಾಡಲಾಗಿತ್ತು.

ಬೆಂಗಳೂರು, ಆಗಸ್ಟ್ 29: ನೇಪಾಳದಲ್ಲಿ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತದಿಂದಾಗಿ ಕೈಲಾಸ ಯಾತ್ರೆಗೆ ತೆರಳಿದ್ದ ಹಲವು ಕನ್ನಡಿಗರು ಸಿಲುಕಿಕೊಂಡಿದ್ದು, ಅವರಿಗೆ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೂರವಾಣಿ ಕರೆ ಮಾಡಿ ಧೈರ್ಯ ತುಂಬಿದ್ದಾರೆ. ದಾರ್ಚೆನ್‌ನಲ್ಲಿರುವ ಯಾತ್ರಾರ್ಥಿಗಳೊಂದಿಗೆ ಮಾತನಾಡಿದ ಅವರು, ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದರು.

ಯಾತ್ರಾರ್ಥಿಗಳು ತಮ್ಮ ಪ್ರಸ್ತುತ ಪರಿಸ್ಥಿತಿಯನ್ನು ವಿವರಿಸುತ್ತಾ, ಕೈಲಾಸ ಬೇಸ್ ಮುಗಿಸಿಕೊಂಡು ದಾರ್ಚೆನ್‌ನಿಂದ ಜ್ಞಾನಿಲಂ ಕಡೆಗೆ ತೆರಳಬೇಕಾಗಿದ್ದು, ಅಲ್ಲಿ ಇಮಿಗ್ರೇಷನ್ ಆಗಬೇಕಿದೆ ಎಂದು ತಿಳಿಸಿದರು. ನೇಪಾಳ ಗಡಿಗೆ ತಲುಪಿದ ನಂತರ ರಸ್ತೆ ಮಾರ್ಗದಲ್ಲಿ ಬರಬೇಕಾಗಿದ್ದು, ರಸ್ತೆಗಳು ಭೂಕುಸಿತದ ಅಪಾಯವನ್ನು ಎದುರಿಸುತ್ತಿವೆ ಎಂದು ಹೇಳಿದರು. ಮುಂದಿನ 12-15 ಗಂಟೆಗಳ ಪ್ರಯಾಣ ಅಪಾಯಕಾರಿಯಾಗಿದ್ದು, ಸಿಲುಕಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಮನವಿ ಮಾಡಿಕೊಂಡರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಕ್ಷಣವೇ ಕರ್ನಾಟಕ ಭವನದ ಅಧಿಕಾರಿಗಳೊಂದಿಗೆ ಮಾತನಾಡಿ, ಅಗತ್ಯ ವ್ಯವಸ್ಥೆ ಮಾಡುವ ಭರವಸೆ ನೀಡಿದರು. “ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬೇಡಿ. ಪರಿಸ್ಥಿತಿಯನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ. ನಾವು ನಿಮ್ಮೊಂದಿಗೆ ಇರುತ್ತೇವೆ” ಎಂದು ಯಾತ್ರಾರ್ಥಿಗಳಿಗೆ ಧೈರ್ಯ ಹೇಳಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us