ಮೈಸೂರು: ಹೊಳೆನರಸೀಪುರ ಶಾಸಕ ಹೆಚ್ ಡಿ ರೇವಣ್ಣ (HD Revanna) ಅವರ ಬಂಧನ ಜೆಡಿಎಸ್ ನಾಯಕರನ್ನು ರೊಚ್ಚಿಗೆಬ್ಬಿಸಿದೆ. ಪಕ್ಷದ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಬೆಂಗಳೂರಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತಾಡಿದರೆ ಕೋರ್ ಕಮಿಟಿ ಅಧ್ಯಕ್ಷರಾಗಿರುವ ಜಿಟಿ ದೇವೇಗೌಡ (GT Devegowda) ಅವರು ಮೈಸೂರಲ್ಲಿ ಒಂದನ್ನು ನಡೆಸಿದರು. ಪ್ರಜ್ವಲ್ ಮತ್ತು ಹೆಚ್ ಡಿ ರೇವಣ್ಣ ಪ್ರಕರಣಗಳನ್ನು ರಾಜ್ಯ ಸರ್ಕಾರ ತನ್ನ ಅಧೀನದಲ್ಲಿರುವ ವಿಶೇಷ ತನಿಖಾ ದಳಕ್ಕೆ ಒಪ್ಪಿಸಿದೆ, ಆದರೆ ಈ ತಂಡದಿಂದ ನಿಷ್ಪಕ್ಷಪಾತ ತನಿಖೆಯಾಗುವುದು ಸಾಧ್ಯವಿಲ್ಲ ಎಂದು ದೇವೇಗೌಡ ಹೇಳಿದರು. ತಮ್ಮ ಪಕ್ಷ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ ಅಂತ ಆಗ್ರಹಿಸಿದರೆ ಸರ್ಕಾರ ಅದನ್ನು ಮಾಡಲ್ಲ, ಇದೇ ಹಿನ್ನೆಲೆಯಲ್ಲಿ ತಾವು ಪ್ರಕರಣವನ್ನು ನ್ಯಾಯಾಂಗ ತನಿಖೆ ಒಪ್ಪಿಸುವಂತೆ ಹೇಳುತ್ತಿದ್ದೇವೆ ಎಂದು ಅವರು ಹೇಳಿದರು. ಈ ಪ್ರಕರಣದ ಸೃಷ್ಟಿಯ ನೇತೃತ್ವ ವಹಿಸಿದ್ದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅನ್ನೋದು ಶಿವರಾಮೇಗೌಡರ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ ಮತ್ತು ಅವರು ತಪ್ಪಿತಸ್ಥರೆನ್ನುವುದು ಸಾಬೀತಾಗುತ್ತದೆ. ಹಾಗಾಗಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಇಲ್ಲವೇ ಮುಖ್ಯಮಂತ್ರಿಯವರು ಶಿವಕುಮಾರ್ ರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ದೇವೇಗೌಡ ಹೇಳಿದರು. ಅವರ ವಿರುದ್ಧ ಕ್ರಮ ಜರುಗಿಸದಿದ್ದ್ದರೆ ತಮ್ಮ ಪಕ್ಷ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಅವರು ಎಚ್ಚರಿಕೆ ನೀಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ