ಇಕ್ಬಾಲ್ ಹುಸೇನ್ ಬೆನ್ನಲ್ಲೇ ಡಿಕೆ ಶಿವಕುಮಾರ್ ಪರ ಶಾಸಕ ರಂಗನಾಥ್ ಬ್ಯಾಟಿಂಗ್!
ಶಾಸಕ ರಂಗನಾಥ್ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸರ್ವ ಸಮುದಾಯಗಳನ್ನು ಒಟ್ಟಿಗೆ ಕೊಂಡೊಯ್ಯುವ ನಾಯಕತ್ವ ಸಾಮರ್ಥ್ಯ ಹೊಂದಿದ್ದಾರೆ ಎಂದಿದ್ದಾರೆ. ಕಾಂಗ್ರೆಸ್ ಪಕ್ಷದ ಜಾತ್ಯತೀತ ತತ್ವಕ್ಕೆ ಡಿ.ಕೆ. ಶಿವಕುಮಾರ್ ಬದ್ಧರಾಗಿದ್ದಾರೆ ಎಂದ ರಂಗನಾಥ್, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಉತ್ತರಾಧಿಕಾರಿ ಕುರಿತ ಚರ್ಚೆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿ, ಪಕ್ಷದ ನಿರ್ಧಾರವೇ ಅಂತಿಮ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು, ಅಕ್ಟೋಬರ್ 24: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂಬ ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆ ಬೆನ್ನಲ್ಲೇ ಇದೀಗ ಡಿಕೆಶಿ ನಾಯಕತ್ವವನ್ನು ಶಾಸಕ ರಂಗನಾಥ್ ಕೂಡ ಸಮರ್ಥಿಸಿಕೊಂಡಿದ್ದಾರೆ. ಡಿಕೆ ಶಿವಕುಮಾರ್ ಯಾವುದೇ ಒಂದು ಸಮುದಾಯದ ಪರವಾಗಿ ನಿಲ್ಲದೆ, ಎಲ್ಲ ಸಮುದಾಯಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಜಾತ್ಯತೀತ ತತ್ವಗಳನ್ನು ಪ್ರತಿಪಾದಿಸುವಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರೂ ಬದ್ಧರಾಗಿದ್ದಾರೆ ಎಂದು ರಂಗನಾಥ್ ಅಭಿಪ್ರಾಯಪಟ್ಟಿದ್ದಾರೆ. ಯತೀಂದ್ರ ಸಿದ್ದರಾಮಯ್ಯ ಅವರು ಸತೀಶ್ ಜಾರಕಿಹೊಳಿ ಅವರನ್ನು ಸಿದ್ದರಾಮಯ್ಯನವರ ಉತ್ತರಾಧಿಕಾರಿ ಎಂದು ಹೇಳಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ರಂಗನಾಥ್, ಆ ಬಗ್ಗೆ ತಾವು ಮಾತನಾಡುವುದಿಲ್ಲ ಎಂದರು. ಡಿಕೆ ಶಿವಕುಮಾರ್ ಒಂದಲ್ಲ ಒಂದು ದಿನ ಸಿಎಂ ಆಗಲೇಬೇಕು ಎಂದ ರಂಗನಾಥ್, ಅಂತಿಮ ನಿರ್ಧಾರ ಪಕ್ಷದ ಹೈಕಮಾಂಡ್ ಮತ್ತು ಶಾಸಕರಿಗೆ ಸೇರಿದ್ದು ಎಂದರು.
Published on: Oct 24, 2025 01:16 PM
