ನಿಮ್ಮಲ್ಲಿರುವ ಶೇರುಗಳ ಬೆಲೆ ಕುಸಿದಾಗ ಗಾಬರಿಯಾಗಬೇಡಿ, ಅದು ನಿಮ್ಮ ತಾಳ್ಮೆಗೊಂದು ಪರೀಕ್ಷೆ: ಡಾ ಬಾಲಾಜಿ ರಾವ್ ಡಿಜಿ
ಬೆಲೆ ಕುಸಿದಾಗ ಗಾಬರಿಯಾಗಿ ಶೇರುಗಳನ್ನು ಮಾರುವುದರಲ್ಲಿ ಯಾವುದೇ ಆರ್ಥವಿಲ್ಲ. ಕಂಪನಿಯ ಮೇಲೆ ನಂಬಿಕೆ ಇಟ್ಟೇ ನಾವು ಅವುಗಳನ್ನು ಖರೀದಿಸಿರುತ್ತೇವೆ. ಆ ನಂಬಿಕೆ ಹೋಗಗೊಡಬಾರದು.
ನೀವು ಬಹಳ ನಂಬಿಕೆಯಿಟ್ಟು ಖರೀದಿಸಿದ ಕಂಪನಿಯೊಂದರ ಶೇರು ಬೆಲೆ ಇದ್ದಕ್ಕಿದ್ದಂತೆ ಕುಸಿದರೆ ಏನು ಮಾಡುತ್ತೀರಿ ಅಂತ ಖ್ಯಾತ ಹೂಡಿಕೆ ತಜ್ಞ ಡಾ ಬಾಲಾಜಿ ರಾವ್ ನಿಮ್ಮೆಡೆ ಒಂದು ಸವಾಲೆಸೆಯುತ್ತಾರೆ. ಅವರೇ ಹೇಳುವಂತೆ ಹಾಗಾದಾಗ ಶೇಕಡಾ 90 ರಷ್ಟು ಹೂಡಿಕೆದಾರರು ಪ್ಯಾನಿಕ್ ಆಗುತ್ತಾರೆ. ಆತಂಕಿತರಾಗಿ ಇನ್ನಷ್ಟು ನಷ್ಟ ಅನುಭವಿಸುವುದು ಬೇಡ ಅಂತ ತಮ್ಮಲ್ಲಿರುವ ಶೇರುಗಳನ್ನು ಮಾರಿಬಿಡುತ್ತಾರೆ. ಹಾಗೆ ಮಾಡುವುದು ಸರಿಯಲ್ಲ ಅಂತ ಅವರು ಮೂರು ಕಂಪನಿ ಶೇರುಗಳ ಉದಾಹರಣೆಯನ್ನು ನೀಡುತ್ತಾರೆ. ಭಾರತದಲ್ಲಿ ಅತಿ ಜನಪ್ರಿಯ ಕೊಬ್ಬರಿ ಎಣ್ಣೆ ಬ್ರ್ಯಾಂಡ್ ಆಗಿರುವ ಪ್ಯಾರಾಶೂಟ್ ಎಣ್ಣೆಯನ್ನು ಮ್ಯಾರಿಕೋ ಇಂಡಸ್ಟ್ರೀಸ್ ತಯಾರು ಮಾಡುತ್ತದೆ. 2016ರಿಂದ 2020 ರ ಅವಧಿವರೆಗೆ ಈ ಕಂಪನಿ ಶೇರು ಬೆಲೆ ರೂ. 358 ಆಗಿತ್ತಂತೆ. ಅದರೆ, ಮಾರ್ಚ್ 2020 ರಲ್ಲಿ ಕೊವಿಡ್-19 ಇಡೀ ವಿಶ್ವವನ್ನೇ ಅಲ್ಲೋಲ ಕಲ್ಲೋಲ ಮಾಡಿದಾಗ ಅದರ ಬೆಲೆ ರೂ 234 ಗಳಿಗೆ ಕುಸಿಯುತ್ತದೆ. ಆಗ ಪ್ಯಾನಿಕ್ ಆಗಿರಬಹುದಾದ ಜನ ತಮ್ಮಲ್ಲಿದ್ದ ಶೇರುಗಳನ್ನು ಮಾರಿಕೊಂಡರು ಅಂತ ಡಾ ರಾವ್ ಹೇಳುತ್ತಾರೆ. ಆದರೆ 2021 ರ ಸೆಪ್ಟೆಂಬರ್ ನಲ್ಲಿ ಮ್ಯಾರಿಕೋ ಇಂಡಸ್ಟ್ರೀಸ್ ಶೇರಿನ ಬೆಲೆ ರೂ 588 ಕ್ಕೆ ಜಿಗಿದಿದೆ.
ಹಾಗೆಯೇ, ಹೊಸೂರು ರಸ್ತೆಯಲ್ಲಿರುವ ಅಶೋಕ್ ಲೈಲ್ಯಾಂಡ್ ಮೊಟಾರು ಕಂಪನಿಯ ಶೇರುಗಳ ಬಗ್ಗೆ ಅವರು ಹೇಳುತ್ತಾರೆ. 2017ರಲ್ಲಿ ರೂ. 150 ಇದ್ದ ಪ್ರತಿ ಶೇರಿನ ಬೆಲೆ ಸತತವಾಗಿ ಕುಸಿಯುತ್ತಾ ರೂ. 38 ರವರೆಗೆ ಬಂದು ಬಿಡುತ್ತದೆ. ಆದರೆ ನಂತರ ಅದು ಕ್ರಮೇಣವಾಗಿ ಚೇತರಿಸಿಕೊಳ್ಳಲಾರಂಭಿಸುತ್ತದೆ. ಈಗ ಕಂಪನಿಯ ಒಂದು ಶೇರಿನ ಬೆಲೆ ರೂ. 130 ಆಗಿದೆ.
ಡಾ ರಾವ್ ಉದಾಹರಿಸಿರುವ ಮೂರನೇ ಸಂಸ್ಥೆಯೆಂದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ. ಕೆಲ ವರ್ಷಗಳ ಹಿಂದೆ ರೂ 400 ಅಗಿದ್ದ ಅದರ ಶೇರಿನ ಬೆಲೆ ಕುಸಿಯಲಾರಂಭಿಸಿ ರೂ. 130ಕ್ಕೆ ಬೀಳುತ್ತದೆ. ಆದರೆ ಈಗ ಅದು ರೂ. 430ಕ್ಕೇರಿದೆ.
ಈ ಉದಾಹರಣೆಗಳನ್ನು ನೀಡಿ ಅವುಗಳಿಂದ ನಾವು ಕಲಿಯಬೇಕಿರುವ ನೀತಿಪಾಠವನ್ನು ಡಾ ರಾವ್ ವಿವರಿಸುತ್ತಾರೆ. ನಮ್ಮಲ್ಲಿರುವ ಶೇರುಗಳ ಬೆಲೆ ಕುಸಿದಾಗ ಸಾಮಾನ್ಯವಾಗಿ ಮೂರು ಕೆಲಸಗಳನ್ನು ಮಾಡುತ್ತೇವೆ. ಒಂದು ಸುಮ್ಮನಿದ್ದು ಬಿಡುತ್ತೇವೆ, ಎರಡನೇಯದ್ದು ಮಾರಿಬಿಡುತ್ತೇವೆ ಮತ್ತು ಮೂರನೇಯದಾಗಿ, ಶೇರುಗಳನ್ನು ಖರೀದಿಸುವಾಗ ಕಂಪನಿಯ ಮೇಲೆ ಅಪಾರ ಭರವಸೆ ಇಟ್ಟುಕೊಂಡಿದ್ದರಿಂದ ಇನ್ನಷ್ಟು ಶೇರುಗಳನ್ನು ಖರೀದಿ ಮಾಡಲು ಮುಂದಾಗುತ್ತೇವೆ.
ಬೆಲೆ ಕುಸಿದಾಗ ಗಾಬರಿಯಾಗಿ ಶೇರುಗಳನ್ನು ಮಾರುವುದರಲ್ಲಿ ಯಾವುದೇ ಆರ್ಥವಿಲ್ಲ. ಕಂಪನಿಯ ಮೇಲೆ ನಂಬಿಕೆ ಇಟ್ಟೇ ನಾವು ಅವುಗಳನ್ನು ಖರೀದಿಸಿರುತ್ತೇವೆ. ಆ ನಂಬಿಕೆ ಹೋಗಗೊಡಬಾರದು. ದೀರ್ಘಾವಧಿಯ ಪ್ರಯೋಜನಗಳ ಬಗ್ಗೆ ಯೋಚಿಸಬೇಕು ಅಂತ ಡಾ ರಾವ್ ಹೇಳುತ್ತಾರೆ.
ಇದನ್ನೂ ಓದಿ: IND vs NZ: ಶತಕದ ಬಳಿಕ ರೋಹಿತ್- ಶಾರ್ದೂಲ್ ಜೊತೆ ಶೆಹ್ರಿ ಬಾಬು ಟ್ಯೂನ್‌ಗೆ ಸ್ಟೆಪ್ ಹಾಕಿದ ಶ್ರೇಯಸ್! ವಿಡಿಯೋ ನೋಡಿ