ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಹೀಗೂ ಆಚರಿಸಬಹುದು, ಮೈಸೂರಿನ ಡಾ ಶ್ವೇತಾರ ಹಾಗೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 08, 2022 | 9:56 PM

ಹೋಟೆಲೊಂದರ ಒಡತಿಯಾಗಿರುವ ಡಾ ಶ್ವೇತಾ ಆವರು ಸಾಮಾಜಿಕ ಚಟುವಟಿಕೆಗಳಲ್ಲೂ ಗುರುತಿಸಿಕೊಂಡಿದ್ದಾರೆ. ಪ್ರತಿಬಾರಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಅವರು ಯಾವುದಾದರೂ ಸಂಘ ಆಚರಿಸುವ ಕಾರ್ಯಕ್ರಮದಲ್ಲಿ ಭಾಷಣಕಾರರಾಗಿ ಹೋಗುತ್ತಿದ್ದರಂತೆ

ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ (cultural capital) ಮೈಸೂರಲ್ಲಿ ಡಾ ಶ್ವೇತಾ (Dr. Shwetha) ಹೆಸರಿನ ಮಹಿಳೆ ಬಹಳ ವಿಭಿನ್ನವಾಗಿ, ವಿಶಿಷ್ಟವಾಗಿ ಮತ್ತು ಅರ್ಥಗರ್ಭಿತವಾಗಿ ಆಚರಿಸಿದರು. ಒಬ್ಬ ಮಹಿಳೆಯಾಗಿ ಅವರು ಬೇರೆ ಮಹಿಳೆಯರ ಬಗ್ಗೆ, ಸಂಸಾರಗಳನ್ನು ನಡೆಸಲು ಅವರು ಪಡುವ ಕಷ್ಟದ ಬಗ್ಗೆ ಯೋಚಿಸಿ ಅವರನ್ನು ಗೌರವಿಸಿದ್ದು ಎಲ್ಲರಿಗೂ ಮೆಚ್ಚುಗೆಯಾಯಿತು. ಡಾ ಶ್ವೇತಾ ಅವರು ಮೈಸೂರು ಎಮ್ ಜಿ ರಸ್ತೆ (MG Road) ಮಾರುಕಟ್ಟೆಯಲ್ಲಿ ತರಕಾರಿ ಮಾರುವ ಮಹಿಳೆಯರಿಗೆ ಅರಿಶಣ, ಕುಂಕುಮ, ಬಳೆ ಮತ್ತು ರವಿಕೆ ನೀಡಿ ಅವರಿಗೆ ಸಿಹಿ ತಿನ್ನಿಸಿ ಗೌರವಿಸಿದರು. ತರಕಾರಿ ಮಾರುವ ಬಹಳಷ್ಟು ಮಹಿಳೆಯರಿಗೆ ಮಂಗಳವಾರ ಅವರ ದಿನವಾಗಿತ್ತು ಅಂತ ಗೊತ್ತಿರಲಿಲ್ಲ. ಡಾ ಶ್ವೇತಾ ಆವರು ತಮ್ಮನ್ನು ಹುಡುಕಿಕೊಂಡು ಬಂದು ಸತ್ಕರಿಸಿದ್ದು ಅವರ ಅನಂದಕ್ಕೆ ಪಾರವೇ ಇಲ್ಲದಂತೆ ಮಾಡಿತ್ತು.

ಅಸಲಿಗೆ ಹೋಟೆಲೊಂದರ ಒಡತಿಯಾಗಿರುವ ಡಾ ಶ್ವೇತಾ ಆವರು ಸಾಮಾಜಿಕ ಚಟುವಟಿಕೆಗಳಲ್ಲೂ ಗುರುತಿಸಿಕೊಂಡಿದ್ದಾರೆ. ಪ್ರತಿಬಾರಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಅವರು ಯಾವುದಾದರೂ ಸಂಘ ಆಚರಿಸುವ ಕಾರ್ಯಕ್ರಮದಲ್ಲಿ ಭಾಷಣಕಾರರಾಗಿ ಹೋಗುತ್ತಿದ್ದರಂತೆ. ಆದರೆ, ಈ ಬಾರಿ ಭಿನ್ನವಾಗಿ ದಿನವನ್ನು ಆಚರಿಸಬೇಕು ಅಂತ ಅಂದುಕೊಂಡಿದ್ದರು.

ತಮ್ಮ ಹೋಟೆಲ್ ಗೆ ತರಕಾರಿ ಕೊಳ್ಳಲು ಅವರು ಪ್ರತಿದಿನ ಈ ಮಾರುಕಟ್ಟೆಗೆ ಬರುತ್ತಾರೆ. ಸದರಿ ಮಾರ್ಕೆಟ್ನಲ್ಲಿ ಬೆಳಗ್ಗೆ 4 ಗಂಟೆಗೆಲ್ಲ ತರಕಾರಿ ಸಿಗುತ್ತದೆ ಎಂದು ಡಾ ಶ್ವೇತಾ ಹೇಳುತ್ತಾರೆ. ತರಕಾರಿ ಮಾರುವ ಮಹಿಳೆಯರು ಬೆಳಗ್ಗೆ 2 ಗಂಟೆಗೆಲ್ಲ ಎದ್ದು ಸಗಟು ತರಕಾರಿ ಮಳಿಗೆಗೆ ಹೋಗಿ ತರಕಾರಿಗಳನ್ನು ಖರೀದಿಸಿ ಈ ಮಾರ್ಕೆಟ್ ಗೆ ಬರುತ್ತಾರೆ. ಅವರ ಕಷ್ಟವನ್ನು ಪ್ರತಿದಿನ ನೋಡುವ ಶ್ವೇತಾ ಅವರಿಗೆ ಮಹಿಳಾ ದಿನಾಚರಣೆಯಂದು ಅವರಿಗೆ ಗೌರವ ಸಲ್ಲಿಸುವ ಇಚ್ಛೆ ಮೂಡಿ ಅದನ್ನು ಕಾರ್ಯರೂಪಕ್ಕೆ ತಂದಿದ್ದಾರೆ.

ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಡಾ ಶ್ವೇತಾ ಅವರಿಗೊಂದು ಸಲಾಂ!

ಇದನ್ನೂ ಓದಿ: International Women’s Day | ತನ್ನ ಜೀವವನ್ನೇ ಪಣಕ್ಕಿಟ್ಟು ಇನ್ನೊಂದು ಜೀವಕ್ಕೆ ಜನ್ಮ ನೀಡುವಾಕೆಗೆ ಇಂದು ಶುಭಾಶಯ ಹೇಳದಿದ್ದರೆ ಹೇಗೆ?

Published on: Mar 08, 2022 09:56 PM