ಕೆಆರ್ ಪುರಂ ಬಳಿ ಬೈಕ್ ಶೋರೂಮ್‌ನಲ್ಲಿ ಅಗ್ನಿ ಅವಘಡ: 13 ಎಲೆಕ್ಟ್ರಿಕ್ ಬೈಕ್‌ಗಳು ಭಸ್ಮ
ಬೈಕ್ ಶೋರೂಮ್‌ನಲ್ಲಿ ಅಗ್ನಿ ಅವಘಡ ಸಂಭವಿಸಿ 13 ಎಲೆಕ್ಟ್ರಿಕ್ ಬೈಕ್‌ಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾದ ಘಟನೆ ಬೆಂಗಳೂರಿನ ಕೆಆರ್ ಪುರಂನ ಟಿಸಿ ಪಾಳ್ಯದಲ್ಲಿ ನಡೆದಿದೆ. ಅದೃಷ್ಟವಶಾತ್, ಸಾವು-ನೋವು ಸಂಭವಿಸಿಲ್ಲ. ಅಪಾರ ನಷ್ಟ ಉಂಟಾಗಿದ್ದು, ಅವಘಡಕ್ಕೆ ಕಾರಣ ಏನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಬೆಂಗಳೂರು, ಜನವರಿ 22: ಬೆಂಗಳೂರು ನಗರದ ಕೆ.ಆರ್.ಪುರಂನ ಟಿ.ಸಿ.ಪಾಳ್ಯ ಸಿಗ್ನಲ್ ಸಮೀಪದ ಎಲೆಕ್ಟ್ರಿಕ್ ಬೈಕ್ ಶೋರೂಮ್‌ನಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದೆ. ಜನವರಿ 20ರ ರಾತ್ರಿ ಸುಮಾರು 10.30ರ ವೇಳೆಗೆ ಶೋರೂಮ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಅಲ್ಲಿ ನಿಲ್ಲಿಸಿದ್ದ 13 ಎಲೆಕ್ಟ್ರಿಕ್ ಬೈಕ್‌ಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಅದೃಷ್ಟವಶಾತ್, ಪ್ರಾಣಾಪಾಯ ಸಂಭವಿಸಿಲ್ಲ. ಮಾಹಿತಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು. ಘಟನೆ ಕೆ.ಆರ್.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸದ್ಯ, ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.