ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ಮೊಟ್ಟಮೊದಲ ಬಜೆಟ್ ನಿಸ್ಸಂದೇಹವಾಗಿ ರೈತಸ್ನೇಹಿಯಾಗಿದೆ
ವರ್ಷವಿಡೀ ಮೈಮುರಿದು ದುಡಿಯುವ ರೈತರ ಆದಾಯ ಹೆಚ್ಚುವ ದಿಶೆಯಲ್ಲಿ ಅವರಿಗೆ ನೆರವಾಗಲು ಮೊದಲ ಬಾರಿಗೆ ದ್ವಿತೀಯ ಕೃಷಿ ನಿರ್ದೇಶನಾಲಯ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರಾಜಕೀಯ ಬದುಕಿನಲ್ಲಿ ಶುಕ್ರವಾರ (ಮಾರ್ಚ್ 4) ನಿಸ್ಸಂದೇಹವಾಗಿ ಒಂದು ಮಹತ್ತರ ದಿನ. ಮೊಟ್ಟಮೊದಲ ಬಾರಿಗೆ ಅವರು ವಿಧಾನಸಭೆಯಲ್ಲಿ ಬಜೆಟ್ ಮಂಡಿಸಿದರು. ಅವರು ಮಂಡಿಸಿದ ರಾಜ್ಯದ 2022-23 ಸಾಲಿನ ಬಜೆಟ್ ನಲ್ಲಿ ರೈತರಿಗೆ ಮತ್ತು ಕೃಷಿಗೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳಿಗೆ ರೈತ ಶಕ್ತಿ ಯೋಜನೆಯನ್ನು ಘೋಷಿಸುವ ಮೂಲಕ ಹೆಚ್ಚಿನ ಪ್ರಾಶಸ್ತ್ಯ ನೀಡಿರುವುದು ಗಮನಾರ್ಹ. ಕೃಷಿ ಉತ್ಪಾದನೆಯಲ್ಲಿ ಹೆಚ್ಚೆಚ್ಚು ಯಂತ್ರೋಪಕರಣಗಳ ಬಳಕೆಯಾಗಿ ಇಳುವರಿಯ ಪ್ರಮಾಣ ಹೆಚ್ಚುವಂತಾಗಲು ಅನ್ನದಾತರಿಗೆ ಪ್ರತಿ ಎಕರೆಗೆ ರೂ. 250 ಯಂತೆ ಗರಿಷ್ಠ 5 ಎಕರೆವರೆಗೆ ಇಂಧನ (ಡೀಸೆಲ್) ಸಹಾಯ ಧನವನ್ನು ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಒದಗಿಸುವ ಘೋಷಣೆಯನ್ನು ಮುಖ್ಯಮಂತ್ರಿಗಳು ಮಾಡಿದರು. ಸದರಿ ಯೋಜನೆಗಾಗಿ ರೂ. 500 ಕೋಟಿ ತೆಗೆದಿರಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಸದನಕ್ಕೆ ತಿಳಿಸಿದರು.
ತೊಗರಿ ಕಣಜವೆಂದು ಗುರುತಿಸಿಕೊಂಡಿರುವ ಕಲಬುರಗಿ ಮತ್ತು ಮುಖ್ಯ ಮಂತ್ರಿಗಳ ತವರು ಜಿಲ್ಲೆ ಹಾವೇರಿಯಲ್ಲಿ ರೇಷ್ಮೆಗೂಡು ಮಾರುಕಟ್ಟೆ ನಿರ್ಮಿಸುವ ಘೋಷಣೆಯನ್ನು ಬೊಮ್ಮಾಯಿ ಅವರು ಮಾಡಿದರು. ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯಲ್ಲಿ ರೇಷ್ಮೆ ತರಬೇತಿ ಕೇಂದ್ರ ಸ್ಥಾಪಿಸುವುದಾಗಿ ಅವರು ಹೇಳಿದರು.
ವರ್ಷವಿಡೀ ಮೈಮುರಿದು ದುಡಿಯುವ ರೈತರ ಆದಾಯ ಹೆಚ್ಚುವ ದಿಶೆಯಲ್ಲಿ ಅವರಿಗೆ ನೆರವಾಗಲು ಮೊದಲ ಬಾರಿಗೆ ದ್ವಿತೀಯ ಕೃಷಿ ನಿರ್ದೇಶನಾಲಯ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದರು.
ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳು ಪೋಲಾಗುವದನ್ನು ತಪ್ಪಿಸಲು, ಅವುಗಳ ಮೌಲ್ಯವರ್ಧನೆ ಮತ್ತು ಸರಬರಾಜು ಸರಪಳಿ (ಸಪ್ಲೈ ಚೇನ್) ಅನ್ನು ಸದೃಢಗೊಳಿಸಲು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹಂತ ಹಂತವಾಗಿ ಮಿನಿ ಆಹಾರ ಪಾರ್ಕುಗಳನ್ನು ಪಿಪಿಪಿ ಮಾಡ್ಯುಲ್ ನಲ್ಲಿ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿಗಳು ಘೋಷಣೆ ಮಾಡಿದರು.
ರಾಜ್ಯದಲ್ಲಿ 2 ಲಕ್ಷ ಹೆಕ್ಟೇರ್ ಜಮೀನಿನಲ್ಲಿ ಸಾವಯವ ಕೃಷಿ ಚಟುವಟಿಕೆಗಳು ನಡೆಯುತ್ತಿವೆ ಮತ್ತು ಸಾವಯವ ಕೃಷಿ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ, ಭಾರತದಲ್ಲಿ ನಮ್ಮ ರಾಜ್ಯ ಮೂರನೇ ಸ್ಥಾನದಲ್ಲಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ: Karnataka Budget 2022: ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ತುಸು ಹುಳಿ – ತುಸು ಸಿಹಿ ಅನ್ನುವಂತಹ ಸಿಎಂ ಬೊಮ್ಮಾಯಿ ಬಜೆಟ್