ಕಾಳಿಂಗ ಸರ್ಪದೊಂದಿಗೆ ಭೀಕರ ಕಾಳಗ: ಮಾಲೀಕನ ಮಕ್ಕಳ ಜೀವ ಉಳಿಸಿ ಪ್ರಾಣ ಬಿಟ್ಟ ಶ್ವಾನ

Edited By:

Updated on: Mar 19, 2025 | 10:16 AM

ಶ್ವಾನ ಎಂದರೆ ನಿಯತ್ತಿನ ಪ್ರಾಣಿ. ಸಾಕಿದ ಮಾಲೀಕನನ್ನು ಜೀವ ಕೊಟ್ಟಾದರೂ ಕಾಪಾಡಿಕೊಳ್ಳುವ ನಿಯತ್ತು ಇರುವ ಜೀವಿ. ಹಾಸನದ ಕಟ್ಟಾಯ ಗ್ರಾಮದಲ್ಲಿ ನಾಯಿಗಳೆರಡು ಕಾಳಿಂಗ ಸರ್ಪದ ಜತೆ ಸೆಣಸಿ ಮಾಲೀಕನ ಮಕ್ಕಳ ಪ್ರಾಣ ಉಳಿಸಿವೆ. ಈ ಸಾಹಸದಲ್ಲಿ ಪಿಟ್​ಬುಲ್ ನಾಯಿಗೆ ಹಾವು ಕಚ್ಚಿದ್ದು, ಮೃತಪಟ್ಟಿದೆ. ಶ್ವಾನಗಳ ಹಾಗೂ ಹಾವಿನ ನಡುವಣ ಭೀಕರ ಕಾಳಗದ ವಿಡಿಯೋ ಇಲ್ಲಿದೆ.

ಹಾಸನ, ಮಾರ್ಚ್ 19: ನಿಯತ್ತಿಗೆ ಮತ್ತೊಂದು ಹೆಸರೇ ನಾಯಿ. ಅನ್ನ ಕೊಟ್ಟು ಸಾಕಿದ ಮಾಲೀಕನಿಗಾಗಿ ಶ್ವಾನಗಳು ಪ್ರಾಣ ತ್ಯಾಗ ಮಾಡಿದ ಅನೇಕ ಉದಾಹರಣೆಗಳು ಇವೆ. ಇದೀಗ ಹಾಸನ ತಾಲ್ಲೂಕಿನ, ಕಟ್ಟಾಯ ಗ್ರಾಮ ಇಂಥದ್ದೊಂದು ಘಟನೆಗೆ ಸಾಕ್ಷಿಯಾಗಿದೆ. ಪಿಟ್‌ಬುಲ್ ಶ್ವಾನವೊಂದು ಕಾಳಿಂಗ ಸರ್ಪದ ಜತೆ ರಣಭೀಕರ ಕಾಳಗ ನಡೆಸಿ ಉಸಿರುಚೆಲ್ಲಿದೆ.

ಶಮಂತ್ ಎಂಬವರು ಪಿಟ್‌ಬುಲ್ ಹಾಗೂ ಡಾಬರ್‌ಮನ್ ನಾಯಿಗಳನ್ನು ತಮ್ಮ ತೋಟದಲ್ಲಿ ಸಾಕಿದ್ದರು. ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಶಬ್ದ ಮಾಡುವುದನ್ನು ಕಂಡು ಕಾಳಿಂಗ ಸರ್ಪವೊಂದು ಮನೆಯ ಕಡೆಗೆ ಬಂದಿದೆ. ಈ ವೇಳೆ ಮಕ್ಕಳು ಮನೆಯ ಬಳಿ ಆಟವಾಡುತ್ತಿದ್ದರು. ಹಾವನ್ನು ಕಂಡ ಪಿಟ್‌ಬುಲ್ ಹಾಗೂ ಡಾಬರ್‌ಮನ್ ನಾಯಿಗಳು ಅದರ ಮೇಲೆ ದಾಳಿ ಮಾಡಿವೆ. ತೆಂಗಿನ ಗರಿ ಕೆಳಗೆ ಇದ್ದ ಹಾವನ್ನು ಎಳೆದು ಹಾವಿನೊಂದಿಗೆ ಸೆಣಸಿವೆ. ಈ ವೇಳೆ ಪಿಟ್‌ಬುಲ್ ನಾಯಿಯ ಮುಖಕ್ಕೆ ಕಾಳಿಂಗ ಸರ್ಪ ಕಚ್ಚಿದೆ. ಹಾವಿನೊಂದಿಗೆ ಸುಮಾರು ಹದಿನೈದು ನಿಮಿಷಕ್ಕೂ ಹೆಚ್ಚು ಕಾಲ ಸೆಣಸಾಡಿದ ಪಿಟ್‌ಬುಲ್ ನಾಯಿ, ಸುಮಾರು ಹತ್ತು ಅಡಿ ಸರ್ಪವನ್ನು ಹತ್ತು ಪೀಸ್ ಮಾಡಿ ಕೊಂದು ಬಳಿಕ ತಾನೂ ಪ್ರಾಣಬಿಟ್ಟಿದೆ. ಭೀಮಾ ಹೆಸರಿನ ಪಿಟ್‌ಬುಲ್ ಶ್ವಾನದ ನಿಧನದಿಂದ ಶಮಂತ್ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಈ ಶ್ವಾನ ಹಲವೆಡೆ ಡಾಗ್ ಶೋನಲ್ಲಿ ಬಹುಮಾನಗಳನ್ನೂ ಪಡೆದಿತ್ತು. ಶ್ವಾನಗಳು ಹಾಗೂ ಹಾವಿನ ನಡುವಿನ ಸೆಣಸಾಟ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಡಿಯೋ ಇಲ್ಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ