ಆನೇಕಲ್: ಹಾಡಹಗಲೇ ನಡುರಸ್ತೆಯಲ್ಲೇ ಸಿನಿಮೀಯ ರೀತಿಯಲ್ಲಿ ಯುವಕನ ಕಿಡ್ನ್ಯಾಪ್ ಯತ್ನ
ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿನಿಮಾ ಸ್ಟೈಲ್‌ನಲ್ಲಿ ಯುವಕನೊಬ್ಬನ ಕಿಡ್ನಾಪ್ ಯತ್ನ ನಡೆದಿದ್ದು, ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ನಡುರಸ್ತೆಯಲ್ಲೇ ಸಾರ್ವಜನಿಕವಾಗಿ ಕಿಡ್ನಾಪ್ ಯತ್ನ ನಡೆದಿರುವುದು ಭದ್ರತೆ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ತನಿಖೆ ಮುಂದುವರಿಸಿದ್ದಾರೆ.
ಆನೇಕಲ್, ಜನರಿ 27: ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನಲ್ಲಿ ಸಿನಿಮಾ ಸ್ಟೈಲ್‌ನಲ್ಲಿ ಯುವಕನನ್ನು ಕಿಡ್ನಾಪ್ ಮಾಡಲು ಯತ್ನಿಸಿದ ಘಟನೆ ನಡೆದಿದೆ. ಆನೇಕಲ್ ತಾಲ್ಲೂಕಿನ ಇಂಡ್ಲವಾಡಿ ಕ್ರಾಸ್ ಬಳಿ ಈ ಘಟನೆ ನಡೆದಿದ್ದು, ನಡುರಸ್ತೆಯಲ್ಲೇ ಯುವಕನ ಮೇಲೆ ಹಲ್ಲೆ ನಡೆಸಿ ಕಾರಿನೊಳಗೆ ಹಾಕಿಕೊಳ್ಳಲು ಪುಡಿರೌಡಿಗಳ ಗ್ಯಾಂಗ್ ಪ್ರಯತ್ನಿಸಿದೆ. ಮೂರು ಬೈಕ್ ಹಾಗೂ ಒಂದು ಕಾರಿನಲ್ಲಿ ಬಂದ ಸುಮಾರು ಎಂಟು ಮಂದಿ ಯುವಕರ ಗ್ಯಾಂಗ್, ರಸ್ತೆಯಲ್ಲಿ ಹೋಗುತ್ತಿದ್ದ ಯುವಕನನ್ನು ತಡೆದು ಕಿಡ್ನಾಪ್ ಮಾಡಲು ಯತ್ನಿಸಿದೆ. ‘ಕ್ಷಮಿಸಿ ತಪ್ಪಾಗಿದೆ, ಬಿಡಿ’ ಎಂದು ಯುವಕ ಮನವಿ ಮಾಡಿಕೊಂಡರೂ ಗ್ಯಾಂಗ್ ಆತನನ್ನು ಬಿಡಲಿಲ್ಲ. ಯುವಕನ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.
ಈ ವೇಳೆ ‘ಇತ್ತೀಚೆಗೆ ಆಪರೇಷನ್ ಆಗಿದೆ, ದಯವಿಟ್ಟು ಬಿಡಿ’ ಎಂದು ಯುವಕ ಅಂಗಲಾಚಿ ಕೇಳಿಕೊಂಡಿದ್ದರೂ ಪುಡಿರೌಡಿಗಳ ಗ್ಯಾಂಗ್ ಕಾರಿನೊಳಗೆ ಎಳೆದು ಹಾಕಲು ಪ್ರಯತ್ನಿಸಿದೆ. ಕಿಡ್ನಾಪರ್‌ಗಳ ಕೈನಿಂದ ತಪ್ಪಿಸಿಕೊಳ್ಳಲು ಯುವಕ ನಾನಾ ರೀತಿಯಲ್ಲಿ ಹೋರಾಡಿದ್ದು, ಕಿರುಚಾಡಿ ಸಹಾಯಕ್ಕಾಗಿ ಕೂಗಿಕೊಂಡಿದ್ದಾನೆ. ಯುವಕನ ಕಿರುಚಾಟ ಕೇಳಿ ಸ್ಥಳಕ್ಕೆ ಸಾರ್ವಜನಿಕರು ಜಮಾಯಿಸಿ ಪ್ರಶ್ನೆ ಮಾಡುತ್ತಿದ್ದಂತೆ ಪುಡಿರೌಡಿಗಳ ಗ್ಯಾಂಗ್ ಯುವಕನನ್ನು ಬಿಟ್ಟು ಕಾರು ಮತ್ತು ಬೈಕ್‌ಗಳಲ್ಲಿ ಪರಾರಿಯಾಗಿದೆ. ಸಾರ್ವಜನಿಕರ ಮಧ್ಯಸ್ಥಿಕೆಯಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಸ್ಥಳಕ್ಕೆ ಪೊಲೀಸರು ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ.
