ಸಚಿವ ಎಮ್ ಟಿ ಬಿ ನಾಗರಾಜ ಕ್ಷೇತ್ರದ ಜನರಿಗೆ ಯುಗಾದಿ ಹಬ್ಬಕ್ಕೆ ಅಕ್ಕಿ, ಬೇಳೆ ಮತ್ತು ಅಡುಗೆ ಎಣ್ಣೆ ಹಂಚಿದರು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 02, 2022 | 1:06 AM

ಸಾಕಷ್ಟು ಸ್ಥಿತಿವಂತರಾಗಿರುವ ನಾಗರಾಜ್ ಅವರು ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಕ್ಷೇತ್ರದ ಜನ ಹಬ್ಬವನ್ನಾಚರಿಸಲು ಅಕ್ಕಿ, ಅಡುಗೆ ಎಣ್ಣೆ ಮತ್ತು ಬೇಳೆಯನ್ನು ಶುಕ್ರವಾರದಂದು ಹಂಚಿದರು. ಜಾತಿ ಮತ್ತು ಧರ್ಮದ ಭೇದವಿಲ್ಲದೆ ನೂರಾರು ಜನ ಸರತಿ ಸಾಲಲ್ಲಿ ನಿಂತು ಪದಾರ್ಥಗಳನ್ನು ಪಡೆದುಕೊಂಡರು.

ಸಣ್ಣ ಕೈಗಾರಿಕೆ, ಸಕ್ಕರೆ ಮತ್ತು ಪೌರಾಡಳಿತ ಖಾತೆ ಸಚಿವರಾಗಿರುವ ಎಮ್ ಟಿ ಬಿ ನಾಗರಾಜ್ (MTB Nagaraj) ಅವರು ತಮ್ಮ ಕ್ಷೇತ್ರದಲ್ಲಿ ಧರ್ಮಾತ್ಮ ಅನಿಸಿಕೊಂಡಿದ್ದಾರೆ. ಸಾಕಷ್ಟು ಸ್ಥಿತಿವಂತರಾಗಿರುವ ನಾಗರಾಜ್ ಅವರು ಯುಗಾದಿ ಹಬ್ಬದ (Ugadi festival) ಹಿನ್ನೆಲೆಯಲ್ಲಿ ಕ್ಷೇತ್ರದ ಜನ ಹಬ್ಬವನ್ನಾಚರಿಸಲು ಅಕ್ಕಿ, ಅಡುಗೆ ಎಣ್ಣೆ (edible oil) ಮತ್ತು ಬೇಳೆಯನ್ನು ಶುಕ್ರವಾರದಂದು ಹಂಚಿದರು. ಜಾತಿ ಮತ್ತು ಧರ್ಮದ ಭೇದವಿಲ್ಲದೆ ನೂರಾರು ಜನ ಸರತಿ ಸಾಲಲ್ಲಿ ನಿಂತು ಪದಾರ್ಥಗಳನ್ನು ಪಡೆದುಕೊಂಡರು. ಹಂಚುವ ಕಾರ್ಯವೂ ಬಹಳ ನೀಟಾಗಿ ನಡೆಯಿತು ಮಾರಾಯ್ರೇ. ಸಚಿವರ ಬೆಂಬಲಿಗರು ಮತ್ತು ಖುದ್ದು ನಾಗರಾಜ್ ಅವರು ಜನರಿಗೆ ಹಬ್ಬದ ಅಡುಗೆ ಸಾಮಾನಗಳನ್ನು ಹಂಚಿದರು. ಅವರ ಉದಾರತೆಯನ್ನು ಅಭಿನಂದಿಸಲೇ ಬೇಕು. ಸಾಮಾನ್ಯವಾಗಿ ಈ ಬಗೆಯ ಹಂಚುವಿಕೆ ಚುನಾವಣಾ ಸಂದರ್ಭಗಳಲ್ಲಿ ಮಾತ್ರ ನಡೆಯುತ್ತದೆ. ರಾಜಕೀಯ ನಾಯಕರು ವೋಟು ಗಿಟ್ಟಿಸಲು ಸೀರೆ, ಪಂಚೆ, ಹಣ, ಮಿಕ್ಸರ್ ಗ್ರೈಂಡರ್, ಫ್ಯಾನ್ ಹಾಗೂ ಇನ್ನಿತರ ಸಾಮಾನುಗಳನ್ನು ಹಂಚುತ್ತಾರೆ.

ಆದರೆ ರಾಜ್ಯದಲ್ಲಾಗಲೀ ಅಥವಾ ನಾಗರಾಜ್ ಅವರ ಕ್ಷೇತ್ರ ಹೊಸಕೋಟೆಯಲ್ಲಾಗಲೀ ಯಾವುದೇ ಚುನಾವಣೆ ಇಲ್ಲ. ಮತ್ತೊಂದು ಗಮನಾರ್ಹ ಸಂಗತಿಯೇನೆಂದರೆ, ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಪತನಗೊಳ್ಳಲು ಕಾರಣರಾದ 17 ಶಾಸಕರಲ್ಲಿ ಒಬ್ಬರಾಗಿದ್ದ ನಾಗರಾಜ್ ಅವರು ಆಗ ವಿಧಾನಸಭಾ ಸ್ಪೀಕರ್ ಅಗಿದ್ದ ರಮೇಶ್ ಕುಮಾರ್ ಪಕ್ಷಾಂತರ ಮಾಡಿದ ಶಾಸಕರನ್ನು ಅನರ್ಹಗೊಳಿಸಿದ ಬಳಿಕ ಆ ಸ್ಥಾನಗಳಿಗೆ ಉಪಚುನಾವಣೆ ನಡೆದಾಗ ಹೊಸಕೋಟೆಯಿಂದ ಮರು ಆಯ್ಕೆ ಬಯಸಿದ್ದರು.

ಆದರೆ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ವಿರುದ್ಧ ಸೋತಿದ್ದರು.

ಬಿಜೆಪಿ, ನಾಗರಾಜ್ ಅವರಿಗೆ ಮಂತ್ರಿ ಮಾಡುವ ವಾಗ್ದಾನವನ್ನು ಈಡೇರಿಸಲು ವಿಧಾನ ಪರಿಷತ್ ಗೆ ಆಯ್ಕೆ ಮಾಡಿತ್ತು. ಹಾಗಾಗಿ, ಚುನಾವಣೆಯಲ್ಲಿ ಸೋಲುಂಡಿದ್ದರೂ ನಾಗರಾಜ ಬಿಜೆಪಿ ಆಗ ಮುಖ್ಯಮಂತ್ರಿಗಳಾಗಿದ್ದ ಬಿ ಎಸ್ ಯಡಿಯೂರಪ್ಪನವರ ಸರ್ಕಾರದಲ್ಲಿ ಸಚಿವರಾದರು ಮತ್ತು ಈಗಲೂ ಅಂದರೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ನಂತರವೂ ಮುಂದುವರಿದಿದ್ದಾರೆ.

ಕ್ಷೇತ್ರದ ಜನ ತಮ್ಮನ್ನು ಸೋಲಿಸಿದ್ದರೂ ನಾಗರಾಜ ಅವರಿಗೆ ಮತದಾರರ ಮೇಲಿನ ಪ್ರೀತಿ ಕಮ್ಮಿಯಾಗಿಲ್ಲ.

ಇದನ್ನೂ ಓದಿ:  ಕಟ್ಟಡವೊಂದನ್ನು ಉದ್ಘಾಟಿಸಲು ಶಾಲಾ ಮಕ್ಕಳಂತೆ ಕಚ್ಚಾಡಿದರು ಸಚಿವ ಎಮ್​ಟಿಬಿ ನಾಗರಾಜ್ ಮತ್ತು ಶಾಸಕ ಶರತ್ ಬಚ್ಚೇಗೌಡ!