ಪ್ರತಾಪ್ ಸಿಂಹನ ತಮ್ಮ ಅಪರಾಧವೆಸಗಿದ್ದು ನಿಜವಾಗಿರುವುದರಿಂದ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ: ಕೆಎಂ ಶಿವಲಿಂಗೇಗೌಡ, ಶಾಸಕ
ಕೊಡಗು-ಮೈಸೂರು ಕ್ಷೇತ್ರದಲ್ಲಿ ಪ್ರತಾಪ್ ಸಿಂಹನ ಜನಪ್ರಿಯತೆ, ವರ್ಚಸ್ಸು ಎಷ್ಟಿದೆ ಅಂತ ವಿಧಾನ ಸಭಾ ಚುನಾವಣೆಯಲ್ಲಿ ಬಯಲಾಗಿದೆ. ಬಿಜೆಪಿಯ ಭದ್ರಕೋಟೆಯಾಗಿದ್ದ ಕೊಡಗಿನ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ತನ್ನ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸದಂತೆ ತಡೆಯಲು ಪ್ರತಾಪ್ ಅವರನ್ನು ಯಾರಾದರೂ ಕಟ್ಟಿಹಾಕಿದ್ದರೆ? ಎಂದು ಶಿವಲಿಂಗೇಗೌಡ ಪ್ರಶ್ನಿಸಿದರು.
ಹಾಸನ: ಅರಸೀಕೆರೆ ಕಾಂಗ್ರೆಸ್ ಶಾಸಕ ಕೆಎಂ ಶಿವಲಿಂಗೇಗೌಡರ (KM Shivalinge Gowda) ಮಾತು ಕಡ್ಡಿ ಮುರಿದಂತೆ, ಖಡಾಮುಡಿ. ಸಂಸದ ಪ್ರತಾಪ್ ಸಿಂಹ (Pratap Simha) ತಮ್ಮ ವಿಕ್ರಮ ಸಿಂಹ (Vikram Simha) ಬೇಲೂರು ಬಳಿಯ 3-ಎಕರೆ ಅರಣ್ಯಪ್ರದೇಶದಲ್ಲಿ ಮರಗಳನ್ನು ಕಡಿಸಿರೋದು ಸತ್ಯ, ಅದೇ ಕಾರಣಕ್ಕೆ ಅರಣ್ಯಾಧಿಕಾರಿಗಳು ವಿಕ್ರಮನನ್ನು ಬಂಧಿಸಿ ಜಾಮೀನು ಮೇಲೆ ಬಿಡುಗಡೆ ಮಾಡಿದ್ದಾರೆ, ಅವನು ನಿರಪರಾಧಿಯಾಗಿದ್ದರೆ ಅದನ್ನು ಸಾಬೀತು ಮಾಡಲಿ, ಅವನು ಮರ ಕಡಿಸಿದ್ದು ಖಚಿತವಾದ ಬಳಿಕವೇ ಬಂಧಿಸಲಾಗಿದೆ, ವಿನಾಕಾರಣ ಬಂಧಿಸಲು ಅಧಿಕಾರಿಗಳಿಗೇನು ಹುಚ್ಚೇ? ಎಂದು ಗೌಡರು ಹೇಳಿದರು. ವಿಕ್ರಮ ವಿರುದ್ಧವಾಗಲೀ, ಅವನಣ್ಣನ ವಿರುದ್ಧವಾಗಲೀ ಸಿದ್ದರಾಮಯ್ಯನವರಿಗೆ ರಾಜಕೀಯ ವೈಷಮ್ಯ ಯಾಕೆ ಇದ್ದೀತು? ಲೋಕ ಸಭಾ ಚುನಾವಣೆಯಲ್ಲಿ ಅವರು ತಮ್ಮ ಮಗನನ್ನು ಮೈಸೂರು ಕ್ಷೇತ್ರದಿಂದ ಕಣಕ್ಕಿಳಿಸಬೇಕಾದರೆ ಪ್ರತಾಪ ಸಿಂಹನ ಪರವಾನಗಿ ಪಡೆಯಬೇಕೇ? ಕಾಂಗ್ರೆಸ್ ಹೈಕಮಾಂಡ್ ಒಪ್ಪಿದರೆ ಅವರು ಖಂಡಿತ ಯತೀಂದ್ರನನ್ನು ಸ್ಪರ್ಧೆಗಿಳಿಸುತ್ತಾರೆ ಎಂದ ಶಿವಲಿಂಗೇಗೌಡರು, ವಿಕ್ರಮ ಸಿಂಹ ಮರ ಕಡಿದಿದ್ದು ಬೇಲೂರುನಲ್ಲಿ, ಅದು ಹಾಸನ ಲೋಕ ಸಭಾ ಕ್ಷೇತ್ರದಲ್ಲಿ ಬರುತ್ತದೆ, ಹಾಗಾಗಿ ಪ್ರತಾಪ್ ಸಿಂಹ ಮಾಡುತ್ತಿರುವ ಅರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ