ರೇವಣ್ಣನಂತೆ ಬಾಬೂರಾವ್ ಚಿಂಚನಸೂರ ಸಹ ಅಧಿಕಾರಿಯ ಮೇಲೆ ಕೂಗಾಡಿದ ಪ್ರಸಂಗ ಯಾದಗಿರಿಯಲ್ಲಿ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 29, 2022 | 1:37 AM

ಶಾಸಕರು, ಮಂತ್ರಿಗಳು ಅಧಿಕಾರಿಗಳನ್ನು ಸಾರ್ವಜನಿಕವಾಗಿ ಬೈದಾಡುವುದು ಕೆಟ್ಟ ಸಂಸ್ಕೃತಿಯ ಪ್ರತೀಕವಾಗಿದೆ. ಪ್ರಾಮಾಣಿಕ ಅಧಿಕಾರಿಳು ಭಯಂಕರ ಸ್ವಾಭಿಮಾನಿಗಳಾಗಿರುತ್ತಾರೆ ಅನ್ನೋದನ್ನು ಅವರು ನೆನಪಿಟ್ಟುಕೊಳ್ಳಬೇಕು.

ಯಾದಗಿರಿ: ಜನ ಪ್ರತಿನಿಧಿಗಳು ಅಧಿಕಾರಿಗಳ ಮೇಲೆ ಸಾರ್ವಜನಿಕವಾಗಿ ರೇಗಾಡುವ ಹೆಚ್ಚಾಗುತ್ತಿವೆ. ಇದು ಯಾಕೆ ಅಂತ ಗೊತ್ತಾಗುತ್ತಿಲ್ಲ. ಮೊನ್ನೆಯಷ್ಟೇ ಜೆಡಿ (ಎಸ್) ನಾಯಕ ಮತ್ತು ಮಾಜಿ ಸಚಿವ ಹೆಚ್ ಡಿ ರೇವಣ್ಣ (HD Revanna) ಅವರು ಒಬ್ಬ ಅಧಿಕಾರಿಗೆ ಮನಸೋ ಇಚ್ಛೆ ಬೈದಾಡಿದ, ಆ ಅಧಿಕಾರಿ ಪ್ಯಾಲಿಯಂತೆ ಅವರೆದುರು ಕೈಕಟ್ಟಿ ನಿಂತುಕೊಂಡಿದ್ದ ವಿಡಿಯೋವನ್ನು ನಾವು ನಿಮಗೆ ತೋರಿಸಿದ್ದೇವೆ. ಗುರುವಾರದಂದು ಯಾದಗಿರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ (KDP Meeting) ಮಾಜಿ ಸಚಿವ ಮತ್ತು ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್ (Baburao Chinchansur) ಅವರು ಸಹ ಒಬ್ಬ ಅಧಿಕಾರಿಯ ವಿರುದ್ಧ ಕೋಪಾವೇಶದಲ್ಲಿ ಕೂಗಾಡಿದ ವಿಡಿಯೋ ನಿಮ್ಮ ಮುಂದಿದೆ ಮಾರಾಯ್ರೇ. ಅವರು ಒಬ್ಬ ಹಿರಿಯ ಅಧಿಕಾರಿಯನ್ನು ಯಾಕೆ ಬೈದಾಡಿದರು ಅಂತ ನಮಗೆ ಗೊತ್ತಾಗಿಲ್ಲ, ಆದರೆ ಗೊತ್ತಾಗಿದ್ದು ಏನೆಂದರೆ ಮಾಜಿ ಸಚಿವರ ಟ್ಯಾಂಟ್ರಮ್ ಸಭೆಯ ಬಳಿಕ ನಗೆಪಾಟಲಿಗೀಡಾಗಿದ್ದು.

ಸಭೆ ನಡೆಯುವಾಗಲೂ, ಬಾಬುರಾವ್ ಕೂಗಾಡಿದ ಬಳಿಕ ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ್ ಅವರು ತಮ್ಮ ಪಕ್ಕದಲ್ಲಿ ಕುಳಿತಿರುವ ಅಧಿಕಾರಿಯ ಕಿವಿಯಲ್ಲಿ ಏನೋ ಹೇಳಿ ಮುಗುಳುನಗುವುದು ವಿಡಿಯೋನಲ್ಲಿ ರೆಕಾರ್ಡ್ ಆಗಿದೆ. ಅಲ್ಲಿ ನೆರೆದಿರುವ ಬೇರೆ ಜನರು ಬಹಳ ಕಷ್ಟಪಟ್ಟು ನಗುವನ್ನು ತಡೆಯುತ್ತಾರೆ. ಬಿಡಿ ಅದು ಬೇರೆ ವಿಷಯ.

ಆದರೆ ಜನ ಪ್ರತಿನಿಧಿಗಳು-ಶಾಸಕರಾಗಲೀ ಸಚಿವರಾಗಲೀ ಯಾಕೆ ಹೀಗೆ ಅಧಿಕಾರಿಗಳ ಮೇಲೆ ಕೂಗಾಡೋದು? ಸರ್ಕಾರೀ ನೌಕರರನ್ನು ಅವರು ತಮ್ಮ ನೌಕರರೆಂದು ಭಾವಿಸುತ್ತಾರೆಯೇ? ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿಗಳೇ ಇಂಥ ಟ್ರೀಟ್ಮೆಂಟ್ ಗುರಿಯಾಗುತ್ತಾರೆ ಅನ್ನೋದು ಸತ್ಯ. ಯಾಕೆಂದರೆ ಅವರು ಜನಪ್ರತಿನಿಧಿಗಳಿಗೆ ಮೇಯುವ ಅವಕಾಶ ಕಲ್ಪಿಸುವುದಿಲ್ಲ. ತಮ್ಮ ಸಂಪಾದನೆಗೆ ಅಡ್ಡಗಾಲು ಹಾಕುತ್ತಿದ್ದಾನೆ ಅಂತ ಅವರಿಗೆ ಕೋಪ ಬರುತ್ತಿರಬಹುದು.

ಅದೇನೇ ಇರಲಿ, ಶಾಸಕರು, ಮಂತ್ರಿಗಳು ಅಧಿಕಾರಿಗಳನ್ನು ಸಾರ್ವಜನಿಕವಾಗಿ ಬೈದಾಡುವುದು ಕೆಟ್ಟ ಸಂಸ್ಕೃತಿಯ ಪ್ರತೀಕವಾಗಿದೆ. ಪ್ರಾಮಾಣಿಕ ಅಧಿಕಾರಿಳು ಭಯಂಕರ ಸ್ವಾಭಿಮಾನಿಗಳಾಗಿರುತ್ತಾರೆ ಅನ್ನೋದನ್ನು ಅವರು ನೆನಪಿಟ್ಟುಕೊಳ್ಳಬೇಕು.

ಇದನ್ನೂ ಓದಿ:  ಹೆಚ್ಡಿ ರೇವಣ್ಣಗೆ ಶಿಕ್ಷಣ ಎಂದರೆ ಏನೆಂದು ಗೊತ್ತಿಲ್ಲ; ತಮ್ಮ ಬಗ್ಗೆ ಟೀಕೆ ಮಾಡಿದ್ದ ರೇವಣ್ಣಗೆ ತಿರುಗೇಟು ಕೊಟ್ಟ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್