ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವೊಂದು ಕಡೆ ಹೀಗೆಲ್ಲ ಮಾಡ್ತಾರೆ ನೋಡಿ!
ಗದಗ ಜಿಲ್ಲೆಯ ಉಣಚಗೆರೆ ಗ್ರಾಮದಲ್ಲಿರುವ ಕೋಳಿ ಫಾರಂ ಅತಿಯಾದ ಗಲೀನಿಂದ ಕೂಡಿರುವುದು ಟಿವಿ9 ರಿಯಾಲಿಟಿ ಚೆಕ್ನಲ್ಲಿ ಕಂಡುಬಂದಿದೆ. ಇದರಿಂದ ಮಾರಾಟವಾಗುವ ಮೊಟ್ಟೆ ಮತ್ತು ಕೋಳಿಗಳಿಂದ ಜನರ ಆರೋಗ್ಯಕ್ಕೆ ಗಂಭೀರ ಅಪಾಯವಿದೆ ಎಂದು ಗ್ರಾಮಸ್ಥರು ಮತ್ತು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಗದಗ, ಡಿಸೆಂಬರ್ 26: ಗದಗ ಜಿಲ್ಲೆಯ ಉಣಚಗೆರೆ ಗ್ರಾಮದಲ್ಲಿರುವ ಕೋಳಿ ಫಾರಂ ಅತಿಯಾದ ಗಲೀಜಿನಿಂದ ಕೂಡಿದ್ದು, ಜನರ ಆರೋಗ್ಯಕ್ಕೆ ಗಂಭೀರ ಅಪಾಯವನ್ನುಂಟು ಮಾಡುತ್ತಿದೆ. ಈ ಕೋಳಿ ಫಾರಂ ಅನೇಕ ವರ್ಷಗಳಿಂದ ಇದೇ ರೀತಿ ಕಾರ್ಯನಿರ್ವಹಿಸುತ್ತಿತ್ತು ಎಂಬುದು ‘ಟಿವಿ9’ ಗ್ರೌಂಡ್ ರಿಪೋರ್ಟ್ನಲ್ಲಿ ತಿಳಿದುಬಂದಿದೆ. ಕೋಳಿಗಳಿಗೆ ಕೊಳಕು ಮಿಶ್ರಿತ ಆಹಾರವನ್ನು ನೀಡಲಾಗುತ್ತಿದೆ ಮತ್ತು ಫಾರಂ ಪರಿಸರವು ತಿಪ್ಪೆಗುಂಡಿಗಿಂತಲೂ ಗಲೀಜಾಗಿದೆ. ಮಾರುಕಟ್ಟೆಗೆ ಸರಬರಾಜಾಗುವ ಕಳಪೆ ಮೊಟ್ಟೆಗಳು ಮತ್ತು ಕೋಳಿಗಳು ಗಜೇಂದ್ರಗಡ ಮತ್ತು ರೋಣ ತಾಲೂಕು ಸೇರಿದಂತೆ ಹಲವೆಡೆ ತಲುಪುತ್ತಿವೆ. ಇದು ಜನರ ಜೀವದೊಂದಿಗೆ ಚೆಲ್ಲಾಟವಾಡಿದಂತೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳು ಈ ಫಾರಂ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಅವರ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಫಾರಂ ಮಾಲೀಕರ ವಿರುದ್ಧ ಮತ್ತು ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
