ಗಾನವಿ ಸಾವು ಪ್ರಕರಣ: ‘ಮದುವೆಯಾಗಿ ಒಂದು ತಿಂಗಳಾದ್ರೂ ಹೆಂಡ್ತಿ ಜತೆಗೆ ಒಂದು ದಿನವೂ ಮಲಗಿಲ್ಲ ಅವನು!’
ಬೆಂಗಳೂರಿನಲ್ಲಿ ನವ ವಿವಾಹಿತೆ ಗಾನವಿ ಮದುವೆಯಾದ ಒಂದೂವರೆ ತಿಂಗಳಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ಸೂರಜ್, ಅವರ ಅಣ್ಣ ಸಂಜಯ್ ಮತ್ತು ತಾಯಿ ಜಯಂತಿ ವಿರುದ್ಧ ವರದಕ್ಷಿಣೆ ಮತ್ತು ಮಾನಸಿಕ ಕಿರುಕುಳದ ಆರೋಪ ಕೇಳಿಬಂದಿದೆ. ಗಾನವಿ ಅವರ ಚಿಕ್ಕಪ್ಪ ಕಾರ್ತಿಕ್ ಅವರು, ಪತಿ ಸೂರಜ್ ಮದುವೆಯಾದಾಗಿನಿಂದ ದೈಹಿಕ ನಿಕಟತೆ ನಿರಾಕರಿಸಿ, ಆಸ್ತಿ ಮತ್ತು ಆಭರಣಕ್ಕಾಗಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ. ಆರೋಪಿಗಳು ಘಟನೆ ನಂತರ ತಲೆಮರೆಸಿಕೊಂಡಿದ್ದು, ಕುಟುಂಬಸ್ಥರು ಬಂಧನಕ್ಕೆ ಆಗ್ರಹಿಸಿದ್ದಾರೆ.
ಬೆಂಗಳೂರು, ಡಿ.26: ಬೆಂಗಳೂರು, ರಾಮಮೂರ್ತಿನಗರದಲ್ಲಿ ನವ ವಿವಾಹಿತೆ ಗಾನವಿ ಮದುವೆಯಾದ ಕೇವಲ ಒಂದೂವರೆ ತಿಂಗಳಿಗೆ ಸಾವನ್ನಪ್ಪಿದ್ದಾರೆ. ಈ ಪ್ರಕರಣ ವರದಕ್ಷಿಣೆ ಕಿರುಕುಳ ಮತ್ತು ಮಾನಸಿಕ ಹಿಂಸೆಯ ಆರೋಪಕ್ಕೆ ಸಂಬಂಧಿಸಿದೆ. ಗಾನವಿ ಅವರ ಚಿಕ್ಕಪ್ಪ ಕಾರ್ತಿಕ್ ನೀಡಿರುವ ಹೇಳಿಕೆ ಪ್ರಕಾರ, ಮದುವೆಯಾದ ಮರುದಿನದಿಂದಲೇ ಗಾನವಿ ಪತಿ ಸೂರಜ್ ಆಭರಣ, ಆಸ್ತಿ ಹಾಗೂ ಕಾರಿಗಾಗಿ ನಿರಂತರ ಕಿರುಕುಳ ನೀಡುತ್ತಿದ್ದರು. ಅಲ್ಲದೆ, ಸೂರಜ್ ಅವರು ಗಾನವಿ ಜೊತೆ ದೈಹಿಕ ಸಂಪರ್ಕ ಹೊಂದಲು ನಿರಾಕರಿಸಿ, ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ಕಾರ್ತಿಕ್ ಆರೋಪಿಸಿದ್ದಾರೆ. ಮದುವೆಗೂ ಮುನ್ನ ವರದಕ್ಷಿಣೆ ಕೇಳಿರಲಿಲ್ಲ, ಆದರೆ ಮದುವೆಯ ನಂತರ ಕಿರುಕುಳ ಶುರುವಾಗಿದೆ. ಗಾನವಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಕುಟುಂಬಸ್ಥರು ಆಸ್ಪತ್ರೆ ಬಳಿ ಪ್ರತಿಭಟನೆ ನಡೆಸಿದ್ದಾರೆ. ಪತಿ ಸೂರಜ್, ಅವರ ಅಣ್ಣ ಸಂಜಯ್ ಮತ್ತು ತಾಯಿ ಜಯಂತಿ ವಿರುದ್ಧ ದೂರು ದಾಖಲಾಗಿದ್ದು, ಮೂವರೂ ತಲೆಮರೆಸಿಕೊಂಡಿದ್ದಾರೆ. ಅವರ ಬಂಧನಕ್ಕೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

