ಕೇಂದ್ರ ಸಚಿವ, ರಾಜ್ಯದ ಬಿಜೆಪಿ ನಾಯಕ ಸೇರಿ ಸ್ಟಿಂಗ್ ಆಪರೇಷನ್ ಮಾಡಿಸಿದ್ದಾರೆ: ಪೆನ್‌ಡ್ರೈವ್ ಪ್ರದರ್ಶಿಸಿ ಗಣಿಗ ರವಿ ಸ್ಫೋಟಕ ಆರೋಪ
ಕಾಂಗ್ರೆಸ್ ಶಾಸಕ ಗಣಿಗ ರವಿ ಅವರು ರಾಜ್ಯ ಸರ್ಕಾರದ ವಿರುದ್ಧ ನಡೆಯುತ್ತಿರುವ ಸ್ಟಿಂಗ್ ಆಪರೇಷನ್ ಕುರಿತು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಕೇಂದ್ರದ ಸಚಿವರು ಮತ್ತು ರಾಜ್ಯದ ನಾಯಕರು ಸೇರಿ ಖಾಸಗಿ ಕಂಪನಿಗಳಿಗೆ ಸುಪಾರಿ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಆಡಿಯೋ, ವಿಡಿಯೋ, ಫೋಟೋ ಸಹಿತ ದಾಖಲೆಗಳನ್ನು ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುವುದಾಗಿ ಶಾಸಕರು ತಿಳಿಸಿದ್ದಾರೆ.
ಮಂಡ್ಯ, ಅಕ್ಟೋಬರ್ 09: ಸ್ಟಿಂಗ್ ಆಪರೇಷನ್ ವಿವಾದ ರಾಜ್ಯದಲ್ಲಿ ಮತ್ತೊಂದು ಸ್ಫೋಟಕ ತಿರುವು ಪಡೆದುಕೊಂಡಿದ್ದು, ಹೆಚ್.ಡಿ. ಕುಮಾರಸ್ವಾಮಿ ಅವರ ರೀತಿಯಲ್ಲಿ ಪೆನ್ ಡ್ರೈವ್ ಪ್ರದರ್ಶಿಸಿ ದಾಖಲೆ ಬಿಡುಗಡೆ ಮಾಡ್ತೀನಿ ಎಂದು ಮಂಡ್ಯದಲ್ಲಿ ಕಾಂಗ್ರೆಸ್ ಶಾಸಕ ಗಣಿಗ ರವಿ ಹೇಳಿದ್ದಾರೆ. ಇನ್ನೊಂದು ವಾರದಲ್ಲಿ ಸ್ಟಿಂಗ್ ಕುತಂತ್ರದ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತೇನೆ. ಡಿಕೆಶಿ ಸಿಎಂ ಆದಮೇಲೆ ಅಭಿವೃದ್ಧಿ ಶರವೇಗ ಪಡೆದುಕೊಂಡಿದೆ. ಇದನ್ನು ಸಹಿಸದೆ ವಿಪಕ್ಷಗಳ ನಾಯಕರು ಅಪಪ್ರಚಾರ ಮಾಡ್ತಿದ್ದಾರೆ. ಸ್ಟಿಂಗ್ ಆಪರೇಷನ್ ಮಾಡಲು ದೆಹಲಿ ಮೂಲದ ಏಜೆನ್ಸಿಗೆ ಸುಪಾರಿ ನೀಡಲಾಗಿದೆ. ಅವರಿಗೆ ಬೆಂಗಳೂರಿನ ಹೋಟೆಲ್‌ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದಾರೆ. ಕೇಂದ್ರ ಸಚಿವರೊಬ್ಬರು, ರಾಜ್ಯದ ಬಿಜೆಪಿ ನಾಯಕರೊಬ್ಬರು ಸೇರಿ ಸ್ಟಿಂಗ್ ಆಪರೇಷನ್ ನಡೆಸಲು ಸುಪಾರಿ ಕೊಟ್ಟಿದ್ದಾರೆ. ಸಚಿವರನ್ನು ಸ್ಟಿಂಗ್ ಮಾಡಿ ಸರ್ಕಾರಕ್ಕೆ ಮುಜುಗರ ತರುವ ಪ್ಲಾನ್ ಅವರದ್ದಾಗಿದೆ. ಆದರೆ ನಮ್ಮ ಸಚಿವರು ಶುದ್ಧ ಹಸ್ತರಿದ್ದಾರೆ, ಅವರ ಬಲೆಗೆ ಬಿದ್ದಿಲ್ಲ. ಸ್ಟಿಂಗ್ ಮಾಡಿಸಲು ಸುಪಾರಿ ಕೊಟ್ಟಿರುವ ಬಗ್ಗೆ ಎಲ್ಲಾ ದಾಖಲೆ ಇದೆ. ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡ್ತೀನಿ. ಇದು ಹಿಟ್ ಆ್ಯಂಡ್ ರನ್ ಆಗಲ್ಲ, ಯಾವ ಏಜೆನ್ಸಿ, ಯಾರು ಭಾಗಿಯಾಗಿದ್ದಾರೆ, ಎಷ್ಟು ಹಣ ಕೊಟ್ಟಿದ್ದಾರೆ ಯಾವ್ಯಾವ ಸಚಿವರನ್ನು ಭೇಟಿಯಾಗಿದ್ದಾರೆ, ಯಾವ್ಯಾವ ನಾಯಕರ ಪಿಎಗಳಿದ್ರು ಎಂಬ ಎಲ್ಲಾ ದಾಖಲೆಗಳಿವೆ. ಸಿಸಿಟಿವಿ, ಆಡಿಯೋ, ವೀಡಿಯೋ ಸಮೇತ ದಾಖಲೆ ಇದೆ. ದಾಖಲೆ ಇರುವುದರಿಂದಲೇ ಸಿಎಂ ಕ್ಯಾಬಿನೆಟ್‌ನಲ್ಲಿ ಎಚ್ಚರಿಕೆ ನೀಡಿದ್ರು. 1 ವಾರದೊಳಗೆ ತನಿಖಾಧಿಕಾರಿ ಮುಂದೆ ದಾಖಲೆ ಇಡುತ್ತೇವೆ. ಮಾಧ್ಯಮಗಳ ಮುಂದೆಯೂ ಎಲ್ಲಾ ದಾಖಲೆ ಬಿಡುಗಡೆ ಮಾಡ್ತೀನಿ ಎಂದು ಗಣಿಗ ರವಿ ಪೆನ್‌ಡ್ರೈವ್ ಪ್ರದರ್ಶಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
