Koppal: ವರ್ಗಾವಣೆಯಾದ ಶಿಕ್ಷಕ ಹೊರಡುವ ಮುನ್ನ ಬಿಸಿಯೂಟ ಸಿಬ್ಬಂದಿ ಕಾಲುಗಳಿಗೆ ನಮಸ್ಕರಿಸಿದರು!
ವಿಜಯಕುಮಾರ್ ಅವರಿಂದ ಇದನ್ನು ನಿರೀಕ್ಷಿಸಿರದ ಮಹಿಳಾ ಸಿಬ್ಬಂದಿ ತೀವ್ರ ಭಾವುಕರಾಗಿ ಕಣ್ಣೀರು ಸುರಿಸುತ್ತಿದ್ದಾರೆ.
ಕೊಪ್ಪಳ: ಶಿಕ್ಷಕ ಮತ್ತು ವಿದ್ಯಾರ್ಥಿಗಳ ಬಾಂಧವ್ಯ ಕತೆಗಳು, ವಿಡಿಯೋಗಳು ನಿಮ್ಮ ಗಮನಕ್ಕೆ ಬರುತ್ತಿವೆ. ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ದೋಟಿಹಾಳ ಗ್ರಾಮದ ಸರ್ಕಾರೀ ಪ್ರೌಢ ಶಾಲೆಯಲ್ಲಿ (government high school) ಕಳೆದ 13 ವರ್ಷಗಳಿಂದ ಇಂಗ್ಲಿಷ್ ಶಿಕ್ಷಕ ಸೇವೆ ಸಲ್ಲಿಸುತ್ತಿದ್ದ ವಿಜಯ ಕುಮಾರ್ ಮೈತ್ರಿ (Vijaykumar Maitri) ಅವರಿಗೆ ಬೇರೆಡೆ ವರ್ಗವಾಗಿದೆ. ತಮ್ಮ ನೆಚ್ಚಿನ ಶಿಕ್ಷಕ ಬಿಟ್ಟು ಹೋಗುತ್ತಿರುವುದು ವಿದ್ಯಾರ್ಥಿಗಳ ಹೃದಯ ಭಾರವಾಗಿಸಿದೆ ಮತ್ತು ಅವರೆಲ್ಲ ಕಣ್ಣೀರು ಹಾಕುತ್ತಿರುವುದನ್ನು ನೋಡಬಹುದು. ಈ ವಿಡಿಯೋದಲ್ಲಿ ಗಮನ ಸೆಳೆಯುವ ಸಂಗತಿಯೆಂದರೆ ಶಿಕ್ಷಕ ವಿಜಯಕುಮಾರ ಶಾಲೆಯ ಬಿಸಿಯೂಟ ಸಿಬ್ಬಂದಿಯ (Bisi Oota staff) ಪಾದಗಳಿಗೆ ನಮಸ್ಕರಿಸುತ್ತಿರುವುದು. ಪ್ರಾಯಶಃ ಬೇರೆ ಯಾರೂ ಹೀಗೆ ಮಾಡಿರಲಿಕ್ಕಿಲ್ಲ. ಪ್ರತಿದಿನ ಮಕ್ಕಳಿಗಾಗಿ ಅಡುಗೆ ತಯಾರಿಸುವ ಸಿಬ್ಬಂದಿ ಪಡುವ ಶ್ರಮದ ಬಗ್ಗೆ ವಿಜಯಕುಮಾರ್ ಗೆ ಅರಿವಿದೆ ಮತ್ತು ಅವರು ಒದಗಿಸುವ ಸೇವೆ ಬಗ್ಗೆ ಗೌರವವಿದೆ. ಅವರಿಂದ ಇದನ್ನು ನಿರೀಕ್ಷಿಸಿರದ ಮಹಿಳಾ ಸಿಬ್ಬಂದಿ ತೀವ್ರ ಭಾವುಕರಾಗಿ ಕಣ್ಣೀರು ಸುರಿಸುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ