H1N1 ಫ್ಲೂ ಆತಂಕ: ಆರೋಗ್ಯ ಇಲಾಖೆಯಿಂದ ಪೋಷಕರು, ಶಾಲೆಗಳಿಗೆ ಶೀಘ್ರ ಹೊಸ ಮಾರ್ಗಸೂಚಿ
ಇತ್ತೀಚೆಗೆ ಮಕ್ಕಳಲ್ಲಿ H1N1 ಪ್ರಕರಣಗಳು ಹೆಚ್ಚುತ್ತಿದ್ದು, ಜ್ವರ, ನೆಗಡಿ, ಕೆಮ್ಮು ಲಕ್ಷಣಗಳು ಕಂಡುಬರುತ್ತಿರೋದು ಪೋಷಕರಲ್ಲಿ ಆತಂಕ ಮೂಡಿಸಿವೆ. ಈ ಸಂಬಂಧ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಆತಂಕ ಪಡದಂತೆ ತಿಳಿಸಿದ್ದು, ಶೀಘ್ರದಲ್ಲೇ ಶಾಲೆಗಳು ಮತ್ತು ಪೋಷಕರಿಗಾಗಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಅನಾರೋಗ್ಯವಿರುವ ಮಕ್ಕಳನ್ನು ಶಾಲೆಗೆ ಕಳುಹಿಸದೆ, ತಕ್ಷಣ ವೈದ್ಯರನ್ನು ಸಂಪರ್ಕಿಸಲು ಸೂಚಿಸಿದ್ದಾರೆ.
ಬೆಂಗಳೂರು, ಆಗಸ್ಟ್ 24: 10-15 ವರ್ಷದ ಮಕ್ಕಳಲ್ಲಿ H1N1 ವೈರಲ್ ಫ್ಲೂ ಪ್ರಕರಣಗಳ ಹೆಚ್ಚಳವು ಪೋಷಕರಲ್ಲಿ ಆತಂಕವನ್ನು ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ, ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಪತ್ರಿಕಾಗೋಷ್ಠಿ ನಡೆಸಿ ರಾಜ್ಯದ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ರಾಜ್ಯದಲ್ಲಿ H1N1 ಪ್ರಕರಣಗಳು ಕಳೆದ ವರ್ಷಕ್ಕೆ ಹೋಲಿಸಿದರೆ ಅಷ್ಟಾಗಿ ಹೆಚ್ಚಿಲ್ಲ, ಆದರೆ ಬೆಂಗಳೂರು ನಗರದಲ್ಲಿ ತುಸು ಏರಿಕೆ ಕಂಡುಬಂದಿದೆ ಎಂದು ತಿಳಿಸಿದ್ದಾರೆ. ಮಕ್ಕಳಲ್ಲಿ ಪದೇ ಪದೇ ಬರುವ ಜ್ವರ, ಬಿಟ್ಟುಬಿಟ್ಟು ಬರುವ ಚಳಿ, ಮೈಕೈ ನೋವು, ಆಯಾಸ, ಸುಸ್ತು, ನೆಗಡಿ, ಕೆಮ್ಮು ಇತ್ಯಾದಿ H1N1 ಲಕ್ಷಣಗಳು ಕಂಡುಬಂದರೆ ನಿರ್ಲಕ್ಷ್ಯ ವಹಿಸಬಾರದು. ಕೂಡಲೇ ಹತ್ತಿರದ ಆಸ್ಪತ್ರೆ ಅಥವಾ ಕ್ಲಿನಿಕ್‌ಗೆ ಭೇಟಿ ನೀಡಿ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಯಾವುದೇ ಕಾರಣಕ್ಕೂ ಸ್ವಯಂ-ಔಷಧೋಪಚಾರ ಮಾಡಬಾರದು ಎಂದು ಸಚಿವರು ಎಚ್ಚರಿಸಿದ್ದಾರೆ. ಶಾಲಾ ಆಡಳಿತ ಮಂಡಳಿಗಳು ಮತ್ತು ಪೋಷಕರಿಗಾಗಿ ಶೀಘ್ರದಲ್ಲೇ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುವುದು. ಅನಾರೋಗ್ಯ ಪೀಡಿತ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು ಮತ್ತು ಮನೆಯಲ್ಲೇ ಚಿಕಿತ್ಸೆ ನೀಡಬೇಕು ಎಂದು ಪ್ರಮುಖವಾಗಿ ಸೂಚಿಸಲಾಗಿದೆ. ಇದು ಇತರ ಮಕ್ಕಳಿಗೆ ಸೋಂಕು ಹರಡುವುದನ್ನು ತಡೆಯಲು ಸಹಕಾರಿಯಾಗುತ್ತದೆ. ಶಾಲೆಗಳು ಏಕಾಏಕಿ ರಜೆ ನೀಡುವ ಬದಲು, ಇಲಾಖೆಗೆ ಮಾಹಿತಿ ನೀಡಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

