2025ರ ಹಂಪಿ ಉತ್ಸವದ ಲಾಂಛನ ಅನಾವರಣ
2025ರ ಹಂಪಿ ಉತ್ಸವದ ಲಾಂಛನವನ್ನು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಅನಾವರಣಗೊಳಿಸಿದ್ದಾರೆ. ಫೆಬ್ರವರಿ 28 ರಿಂದ ಮಾರ್ಚ್ 2ರವರೆಗೆ ನಡೆಯುವ ಈ ಉತ್ಸವವು ಹಿಂದಿನ ವರ್ಷಗಳಿಗಿಂತಲೂ ಅದ್ದೂರಿಯಾಗಿರಲಿದೆ. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದ್ದರೂ, ಭಾಗವಹಿಸುವ ಕಲಾವಿದರನ್ನು ಇನ್ನೂ ಅಂತಿಮಗೊಳಿಸಿಲ್ಲ. ಉತ್ಸವದ ಸಮಯದಲ್ಲಿ ಸಚಿವರು ವಿಜಯನಗರ ಜಿಲ್ಲೆಯಲ್ಲಿಯೇ ಠಿಕಾಣಿ ಹೂಡಲಿದ್ದಾರೆ.
ವಿಜಯನಗರ, ಜನವರಿ 28: ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ 2025ರ ಹಂಪಿ ಉತ್ಸವದ ಲಾಂಛನವನ್ನ ವಿಜಯನಗರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಅನಾವರಣಗೊಳಿಸಿದರು.
ಫೆಬ್ರವರಿ 28 ರಿಂದ ಮಾರ್ಚ್ 1 ಮತ್ತು 2ನೇ ತಾರೀಖಿನವರೆಗೆ ಮೂರು ದಿನಗಳ ಕಾಲ ಹಂಪಿ ಉತ್ಸವ ನಡೆಯಲಿದೆ. ಹೀಗಾಗಿ, ಕಳೆದ ಬಾರಿಗಿಂತಲೂ ಈ ಬಾರಿ ಇನ್ನಷ್ಟು ಅದ್ದೂರಿಯಾಗಿ ಮಾಡಲು ಜಿಲ್ಲಾಡಳಿತ ಸಿದ್ದತೆ ಮಾಡಿಕೊಳ್ಳುತ್ತಿದೆ. ಹಂಪಿ ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆಧ್ಯತೆ ಕೊಡಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಆದರೆ, ಉತ್ಸವದಲ್ಲಿ ಯಾವೆಲ್ಲ ಕಲಾವಿದರು ಭಾಗಿಯಾಗಬೇಕು ಎಂಬುವುದು ಇನ್ನೂ ಅಂತಿಮವಾಗಿಲ್ಲ.
ಹಂಪಿ ಉತ್ಸವದ ವೇಳೆ ಒಂದು ವಾರಗಳ ಕಾಲ ವಿಜಯನಗರ ಜಿಲ್ಲೆಯಲ್ಲೇ ಠಿಕಾಣಿ ಹೂಡುತ್ತೇನೆ. ವಿಜೃಂಭಣೆಯಿಂದ ಹಂಪಿ ಉತ್ಸವ ಮಾಡೋಣ ಎಂದು ಉಸ್ತುವಾರಿ ಸಚಿವ ಜಮೀರ್ ಹೇಳಿದರು.
ಇನ್ನು ಹಂಪಿ ಉತ್ಸವ ಲಾಂಛನ ಅನಾವರಣ ಕಾರ್ಯಕ್ರಮದಲ್ಲಿ ಶಾಸಕರಾದ ಗವಿಯಪ್ಪ, ಎನ್ಟಿ ಶ್ರೀನಿವಾಸ್, ನೇಮಿರಾಜ್ ನಾಯಕ್, ಕೃಷ್ಣ ನಾಯಕ್, ಲತಾ ಮಲ್ಲಿಕಾರ್ಜುನ, ಜಿಲ್ಲಾಧಿಕಾರಿ, ಸಿಇಓ, ಡಿಸಿಎಫ್ ಅರ್ಸಲಾನ್, ಎಎಸ್ಪಿ ಅಕ್ರಂ ಪಾಷಾ ಸೇರಿ ಇತರರು ಭಾಗಿಯಾಗಿದ್ದರು.