AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಯಾಟ್ಸ್‌ಮನ್ ಕುತ್ತಿಗೆಗೆ ಬಡಿದ ಚೆಂಡು! ಕೂದಲೆಳೆ ಅಂತರದಲ್ಲಿ ತಪ್ಪಿದ ಅವಘಡ

ಬ್ಯಾಟ್ಸ್‌ಮನ್ ಕುತ್ತಿಗೆಗೆ ಬಡಿದ ಚೆಂಡು! ಕೂದಲೆಳೆ ಅಂತರದಲ್ಲಿ ತಪ್ಪಿದ ಅವಘಡ

ಪೃಥ್ವಿಶಂಕರ
|

Updated on: Jan 15, 2026 | 9:29 PM

Share

BBL 2025-26: ಬಿಗ್ ಬ್ಯಾಷ್ ಲೀಗ್ 2025-26 ರಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ಆಟಗಾರ ಹ್ಯಾರಿ ಡಿಕ್ಸನ್ ಪರ್ತ್ ಸ್ಕಾರ್ಚರ್ಸ್ ವಿರುದ್ಧದ ಪಂದ್ಯದಲ್ಲಿ ಗಂಭೀರ ಗಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಮಹ್ಲಿ ಬಿಯರ್ಡ್‌ಮನ್ ಎಸೆದ ಶಾರ್ಟ್ ಬಾಲ್ ಡಿಕ್ಸನ್ ಭುಜ ಮತ್ತು ಕುತ್ತಿಗೆಗೆ ಬಡಿಯಿತು. ಸರಿಯಾದ ಸಮಯಕ್ಕೆ ಕುತ್ತಿಗೆ ತಿರುಗಿಸಿದ್ದರಿಂದ ದೊಡ್ಡ ಗಂಡಾಂತರ ತಪ್ಪಿತು. ರೆನೆಗೇಡ್ಸ್ ಪಂದ್ಯ ಸೋತರೂ ಡಿಕ್ಸನ್ ಪ್ರಾಣಾಪಾಯದಿಂದ ಪಾರಾಗಿದ್ದು ಸಮಾಧಾನಕರ ಸಂಗತಿ.

2025-26 ರ ಬಿಗ್ ಬ್ಯಾಷ್ ಲೀಗ್​ನಲ್ಲಿ ಮಹಾ ಗಂಡಾಂತರವೊಂದು ಕೂದಲೆಳೆ ಅಂತರದಿಂದ ತಪ್ಪಿಹೋಗಿದೆ. ಮೆಲ್ಬೋರ್ನ್ ರೆನೆಗೇಡ್ಸ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಹ್ಯಾರಿ ಡಿಕ್ಸನ್ ಪ್ರಾಣಾಪಾಯದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ವಾಸ್ತವವಾಗಗಿ ಜನವರಿ 15 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಪರ್ತ್ ಸ್ಕಾರ್ಚರ್ಸ್ ಮತ್ತು ಮೆಲ್ಬೋರ್ನ್ ರೆನೆಗೇಡ್ಸ್ ತಂಡದ ನಡುವೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪರ್ತ್ ಸ್ಕಾರ್ಚರ್ಸ್ ತಂಡವು ಫಿನ್ ಅಲೆನ್ ಅವರ ಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 219 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು.

ಈ ಗುರಿ ಬೆನ್ನಟ್ಟಿದ ಮೆಲ್ಬೋರ್ನ್ ರೆನೆಗೇಡ್ಸ್ ತಂಡದ ಪರ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹ್ಯಾರಿ ಡಿಕ್ಸನ್ ಇನ್ನಿಂಗ್ಸ್​ನ 7ನೇ ಓವರ್​ನಲ್ಲಿ ಗಂಭೀರ ಗಾಯಕ್ಕೆ ತುತ್ತಾದರು. ಪರ್ತ್ ಪರ ಏಳನೇ ಓವರ್ ಬೌಲಿಂಗ್ ಮಾಡುತ್ತಿದ್ದ ಮಹ್ಲಿ ಬಿಯರ್ಡ್‌ಮನ್ ಕೊನೆಯ ಎಸೆತವನ್ನು ಶಾರ್ಟ್ ಬಾಲ್ ಎಸೆದರು. ಇತ್ತ ಸ್ಟ್ರೈಕ್​ನಲ್ಲಿದ್ದ ಡಿಕ್ಸನ್ ಚೆಂಡನ್ನು ಎಳೆಯಲು ಯತ್ನಿಸಿದರು. ಆದರೆ ಬ್ಯಾಟಿಗೆ ತಾಗದ ಚೆಂಡು ಡಿಕ್ಸನ್ ಅವರ ಭುಜ ಮತ್ತು ಕುತ್ತಿಗೆಯ ನಡುವೆ ಬಡಿಯಿತು. ಚೆಂಡು ಬಲವಾಗಿ ಬಿದ್ದ ಕಾರಣದಿಂದಾಗಿ ಡಿಕ್ಸನ್ ತೀವ್ರ ನೋವಿನಿಂದ ನರಳಲಾರಂಭಿಸಿದರು. ತಕ್ಷಣವೇ ಮೈದಾನಕ್ಕೆ ಬಂದ ಫಿಸಿಯೋ ಅವರನ್ನು ಪರೀಕ್ಷಿಸಿ ಮೈದಾನದಿಂದ ಹೊರಗೆ ಕರೆದುಕೊಂಡು ಹೋದರು. ಡಿಕ್ಸನ್ ತಮ್ಮ ಕುತ್ತಿಗೆಯನ್ನು ಸ್ವಲ್ಪ ಬಲಕ್ಕೆ ತಿರುಗಿಸದಿದ್ದರೆ, ಚೆಂಡು ನೇರವಾಗಿ ಅವರ ಗಂಟಲಿಗೆ ಬೀಳುತ್ತಿತ್ತು. ಇದರಿಂದ ಡಿಕ್ಸನ್ ಅವರ ಪ್ರಾಣಕ್ಕೆ ಕುತ್ತು ಬರುತ್ತಿತ್ತು. ಆದರೆ ಅದೃಷ್ಟವಶಾತ್ ಡಿಕ್ಸನ್ ಮಹಾ ಅವಘಡದಿಂದ ಸ್ವಲ್ಪದರಲ್ಲೇ ಪಾರಾದರು.

ಆದಾಗ್ಯೂ 220 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಮೆಲ್ಬೋರ್ನ್ ರೆನೆಗೇಡ್ಸ್ ನಿಗದಿತ ಓವರ್‌ಗಳಲ್ಲಿ 169 ರನ್‌ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ, ಪರ್ತ್ ಸ್ಕಾರ್ಚರ್ಸ್ 50 ರನ್‌ಗಳಿಂದ ಆರಾಮದಾಯಕ ಗೆಲುವು ಸಾಧಿಸಿ ಪ್ಲೇಆಫ್‌ನತ್ತ ಹೆಜ್ಜೆ ಹಾಕಿತು. ರೆನೆಗೇಡ್ಸ್ ತಂಡದ ಪರ ಟಿಮ್ ಸೀಫರ್ಟ್ (66) ಮತ್ತು ಜೇಕ್ ಫ್ರೇಸರ್-ಮೆಕ್‌ಗುರ್ಕ್ (42) ಕಠಿಣ ಹೋರಾಟ ನಡೆಸಿದರಾದರೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ