ಪ್ರಲ್ಹಾದ್​ ಜೋಶಿ ಭೇಟಿಯಾಗಿ ಹಲ್ಲೆ ಘಟನೆ ಬಗ್ಗೆ ವಿವರಿಸಿದ ಹರ್ಷಿಕಾ, ಭುವನ್​

ಪ್ರಲ್ಹಾದ್​ ಜೋಶಿ ಭೇಟಿಯಾಗಿ ಹಲ್ಲೆ ಘಟನೆ ಬಗ್ಗೆ ವಿವರಿಸಿದ ಹರ್ಷಿಕಾ, ಭುವನ್​

TV9 Web
| Updated By: ಮದನ್​ ಕುಮಾರ್​

Updated on: Apr 24, 2024 | 7:24 PM

ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಅವರು ಹುಬ್ಬಳಿಗೆ ತೆರಳಿ ಪ್ರಲ್ಹಾದ್​ ಜೋಶಿ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಬೆಂಗಳೂರಲ್ಲಿ ತಮ್ಮ ಮೇಲೆ ನಡೆದ ಹಲ್ಲೆ ಪ್ರಯತ್ನದ ಬಗ್ಗೆ ಈ ದಂಪತಿ ವಿವರಿಸಿದ್ದಾರೆ. ಲೋಕಸಭಾ ಚುನಾವಣೆ ಮುಗಿದ ನಂತರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಪ್ರಲ್ಹಾದ್​ ಜೋಶಿ ಅವರು ಭರವಸೆ ನೀಡಿದ್ದಾರೆ. ಈ ಸಂದರ್ಭದ ವಿಡಿಯೋ ಇಲ್ಲಿದೆ..

ಕನ್ನಡದ ನಟಿ ಹರ್ಷಿಕಾ ಪೂಣಚ್ಚ (Harshika Poonacha) ಹಾಗೂ ನಟ ಭುವನ್​ ಪೊನ್ನಣ್ಣ ಅವರ ಮೇಲೆ ಬೆಂಗಳೂರಿನಲ್ಲಿ ಇತ್ತೀಚೆಗೆ ಹಲ್ಲೆ ಪ್ರಯತ್ನ ನಡೆದಿತ್ತು. ಆ ಘಟನೆಗೆ ಸಂಬಂಧಿಸಿದಂತೆ ಸಂಸದ ಪ್ರಲ್ಹಾದ್​ ಜೋಶಿ ಅವರಿಗೆ ಹರ್ಷಿಕಾ ಮತ್ತು ಭುವನ್​ ಮಾಹಿತಿ ನೀಡಿದ್ದಾರೆ. ಇಂದು (ಏಪ್ರಿಲ್​ 24) ಹುಬ್ಬಳ್ಳಿಯಲ್ಲಿ ಪ್ರಲ್ಹಾದ್​ ಜೋಶಿ ಅವರ ನಿವಾಸಕ್ಕೆ ಹರ್ಷಿಕಾ-ಭುವನ್ ಭೇಟಿ ನೀಡಿದ್ದಾರೆ. ಅಂದು ನಡೆದ ಘಟನೆ ಏನು ಎಂಬುದನ್ನು ವಿವರಿಸಿದ್ದಾರೆ. ಕನ್ನಡದಲ್ಲಿ ಮಾತನಾಡಿದ್ದಕ್ಕೆ ಅಲ್ಲಿನ ಜನರು ತಮ್ಮ ಮೇಲೆ ಸಿಟ್ಟಾಗಿದ್ದರು ಎಂಬುದನ್ನು ಹರ್ಷಿಕಾ ತಿಳಿಸಿದ್ದಾರೆ. ಭುವನ್​ (Bhuvan Ponnanna) ಧರಿಸಿದ್ದ ಚೈನ್​ ಕಸಿಯುವ ಪ್ರಯತ್ನ ಕೂಡ ಅಂದು ನಡೆದಿತ್ತು. ಆ ಘಟನೆಯ ಪೂರ್ತಿ ವಿವರವನ್ನು ಪ್ರಹ್ಲಾದ್​ ಜೋಶಿ ಅವರಿಗೆ ಈ ದಂಪತಿ ತಿಳಿಸಿದ್ದಾರೆ. ‘ಈ ರೀತಿ ಆಗಬಾರದ ಸರ್​. ಇದು ತುಂಬಾ ಕೆಟ್ಟ ಟ್ರೆಂಡ್​. ಸಾರ್ವಜನಿಕ ಕ್ಷೇತ್ರದಲ್ಲಿ ಇರುವ ನಮಗೇ ಈ ರೀತಿ ಆದರೆ ಸಾಮಾನ್ಯ ಜನರ ಗತಿ ಏನು. ನಾವು ಅವರ ಏರಿಯಾದಲ್ಲಿ ಹೋಗುತ್ತಿದ್ದರೆ ಸ್ಕೂಟರ್​ನಲ್ಲಿ ಅಡ್ಡ ಹಾಕುತ್ತಾರೆ. ಬೇಕು ಅಂತಲೇ ಆ ರೀತಿ ಮಾಡುತ್ತಾರೆ’ ಎಂದು ಭುವನ್​ ಕಳವಳ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವುದಾಗಿ ಪ್ರಲ್ಹಾದ್​ ಜೋಶಿ ಭರವಸೆ ನೀಡಿದ್ದಾರೆ. ‘ನಾನು ಕಮಿಷನರ್​ ಜೊತೆ ಈ ಬಗ್ಗೆ ಮಾತನಾಡುತ್ತೇನೆ. ನಾವು ನಿಮ್ಮ ಜೊತೆ ಇದ್ದೇವೆ. ಚುನಾವಣೆ ಮುಗಿದ ಬಳಿಕ ಈ ವಿಷಯವನ್ನು ನಾವು ತುಂಬ ಗಂಭೀರವಾಗಿ ಪರಿಗಣಿಸುತ್ತೇವೆ’ ಎಂದು ಪ್ರಲ್ಹಾದ್​ ಜೋಶಿ (Pralhad Joshi) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.