ಇಂದಿನಿಂದ ಹಾಸನಾಂಬೆಯ ದರ್ಶನ : ಹೇಗಿದೆ ನೋಡಿ ಸಿದ್ಧತೆ
ಹಾಸನದ ಶಕ್ತಿ ದೇವತೆ ಹಾಸನಾಂಬೆಯ ಜಾತ್ರಾ ಮಹೋತ್ಸವ ಇಂದು ಆರಂಭವಾಗಿದೆ. ಮಧ್ಯಾಹ್ನ 12 ಗಂಟೆಗೆ ಗರ್ಭಗುಡಿ ಬಾಗಿಲು ತೆರೆಯಲಾಗುವುದು. ಈ ವರ್ಷ ಅಕ್ಟೋಬರ್ 9 ರಿಂದ 23 ರವರೆಗೆ ನಡೆಯುವ ಉತ್ಸವದಲ್ಲಿ, ಮೊದಲ ಹಾಗೂ ಕೊನೆಯ ದಿನ ಹೊರತುಪಡಿಸಿ 13 ದಿನ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಜಿಲ್ಲಾಡಳಿತವು 25 ಲಕ್ಷಕ್ಕೂ ಹೆಚ್ಚು ಭಕ್ತರನ್ನು ನಿರೀಕ್ಷಿಸಿ ಸಕಲ ಸಿದ್ಧತೆಗಳನ್ನು ಮಾಡಿದೆ.
ಹಾಸನ, ಅ.9: ಹಾಸನಾಂಬೆಯ ದರ್ಶನಕ್ಕೆ (Hasanamba Darshan) ಕ್ಷಣಗಣನೆ ಆರಂಭವಾಗಿದ್ದು, ಇಂದು ವಿಧ್ಯುಕ್ತವಾಗಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆತಿದೆ. ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಈ ದೇಗುಲದ ಗರ್ಭಗುಡಿ ಬಾಗಿಲನ್ನು ಇಂದು ಅಪರಾಹ್ನ 12 ಗಂಟೆಗೆ ತೆರೆಯಲಾಗುವುದು. ಅಶ್ವಯುಜ ಮಾಸದ ಮೊದಲ ಗುರುವಾರ ಸಾಮಾನ್ಯವಾಗಿ ಈ ಬಾಗಿಲು ತೆರೆಯಲಾಗುತ್ತದೆ. ಜಿಲ್ಲಾಡಳಿತವು ಭಕ್ತರ ದರ್ಶನಕ್ಕಾಗಿ ಸಕಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ದೇವಾಲಯದ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಹೂವಿನ ಅಲಂಕಾರದಿಂದ ಆಕರ್ಷಣೀಯವಾಗಿ ಸಿಂಗರಿಸಲಾಗಿದೆ. ಸಿದ್ಧೇಶ್ವರ ಸ್ವಾಮಿ ದೇವಾಲಯದಿಂದ ಆರಂಭವಾಗಿ ಇಡೀ ದೇಗುಲದ ಆವರಣ ಹಬ್ಬದ ವಾತಾವರಣ ಸೃಷ್ಟಿಸಿದೆ. ಕಳೆದ ವರ್ಷ ನವೆಂಬರ್ 3 ರಂದು ಮುಚ್ಚಲ್ಪಟ್ಟಿದ್ದ ದೇಗುಲದ ಬಾಗಿಲು, ಇದೀಗ ಅಕ್ಟೋಬರ್ 9 ರಂದು ಮತ್ತೆ ತೆರೆಯಲ್ಪಟ್ಟಿದೆ. ಈ ವರ್ಷ ಒಟ್ಟು 15 ದಿನಗಳ ಕಾಲ ಗರ್ಭಗುಡಿ ಬಾಗಿಲು ತೆರೆದಿರುತ್ತದೆ. ಅಕ್ಟೋಬರ್ 9 (ಪ್ರಥಮ ದಿನ) ಮತ್ತು ಅಕ್ಟೋಬರ್ 23 (ಕೊನೆಯ ದಿನ) ಹೊರತುಪಡಿಸಿ, ಉಳಿದ 13 ದಿನಗಳ ಕಾಲ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕಳೆದ ವರ್ಷ ಸುಮಾರು 20 ಲಕ್ಷಕ್ಕೂ ಅಧಿಕ ಭಕ್ತರು ಹಾಸನಾಂಬೆಯ ದರ್ಶನ ಪಡೆದಿದ್ದರು. ಈ ವರ್ಷ ದರ್ಶನದ ದಿನಗಳು ಹೆಚ್ಚಾಗಿರುವುದರಿಂದ, 25 ಲಕ್ಷಕ್ಕೂ ಅಧಿಕ ಸಂಖ್ಯೆಯ ಭಕ್ತರು ಆಗಮಿಸುವ ನಿರೀಕ್ಷೆ ಇಟ್ಟುಕೊಂಡಿದೆ. ಅದಕ್ಕೆ ಪೂರಕವಾಗಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

