ಹಾವೇರಿಯಲ್ಲಿ ಭೀಕರ ದುರಂತ: ನಿಲ್ದಾಣದಲ್ಲಿದ್ದ ಜನರ ಮೇಲೆ ನುಗ್ಗಿದ ಬಸ್, ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಭಯಾನಕ ವಿಡಿಯೋ
ಹಾವೇರಿ ಬಸ್ ನಿಲ್ದಾಣದಲ್ಲಿ ವೇಗವಾಗಿ ಬಂದ ಬಸ್ ಪ್ರಯಾಣಿಕರ ಮೇಲೆ ನುಗ್ಗಿದ ಪರಿಣಾಮ ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ಅಪಘಾತದಲ್ಲಿ 2 ವರ್ಷದ ಮಗು ಹಜರತ್ ಅಲಿ ಗಂಭೀರವಾಗಿ ಗಾಯಗೊಂಡಿದ್ದು, ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಚಾಲಕನ ನಿರ್ಲಕ್ಷ್ಯವೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಸಿಸಿಟಿವಿ ವಿಡಿಯೋ ಇಲ್ಲಿದೆ.
ಹಾವೇರಿ, ಏಪ್ರಿಲ್ 1: ಹಾವೇರಿ ನಗರ ಬಸ್ ನಿಲ್ದಾಣದಲ್ಲಿ ಇಂದು (ಏಪ್ರಿಲ್ 1) ಮುಂಜಾನೆ ಭೀಕರ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಬಸ್ ನಿಲ್ದಾಣದ ಪ್ಲಾಟ್‌ಫಾರ್ಮ್ ಮೇಲೆ ಬಸ್ಸಿಗಾಗಿ ಕಾಯುತ್ತಿದ್ದ ಪ್ರಯಾಣಿಕರ ಮೇಲೆ ಏಕಾಏಕಿ ನುಗ್ಗಿದ್ದು, ಘಟನೆಯಲ್ಲಿ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ. ಬೆಳಗ್ಗೆ ಸುಮಾರು 7 ಗಂಟೆಯ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ. ಬಸ್ ಚಾಲಕನ ಅತಿಯಾದ ವೇಗ ಮತ್ತು ನಿರ್ಲಕ್ಷ್ಯತನವೇ ಘಟನೆಗೆ ಕಾರಣ ಎಂಬುದು ತಿಳಿದುಬಂದಿದೆ.
ಘಟನೆಯಲ್ಲಿ 2 ವರ್ಷದ ಪುಟ್ಟ ಮಗು ಹಜರತ್ ಅಲಿಗೆ ತೀವ್ರವಾಗಿ ಗಾಯಗಳಾಗಿದ್ದು, ಸದ್ಯ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಉಳಿದ ಗಾಯಾಳುಗಳಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿದ್ದು, ಅಪಘಾತದ ಭೀಕರತೆಯನ್ನು ಸಾರಿ ಹೇಳುತ್ತಿವೆ. ಸಾರ್ವಜನಿಕರು ಚಾಲಕನ ಬೇಜವಾಬ್ದಾರಿತನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ, ವಿಡಿಯೋ: ಅಣ್ಣಪ್ಪ ಬಾರ್ಕಿ, ಟಿವಿ9 ಹಾವೇರಿ

