ವಿಧಾನಸೌಧದಲ್ಲೇ ಭಯೋತ್ಪಾದಕರನ್ನಿಟ್ಟುಕೊಂಡು ಪರಪ್ಪನ ಅಗ್ರಹಾರ ಜೈಲಿನ ಬಗ್ಗೆ ಮಾತನಾಡ್ತಾರೆ: ಹೆಚ್​ಡಿ ಕುಮಾರಸ್ವಾಮಿ ವಾಗ್ದಾಳಿ

Updated on: Nov 10, 2025 | 1:59 PM

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ನೀಡಲಾಗುತ್ತಿರುವ ರಾಜಾತಿಥ್ಯದ ಕುರಿತು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಇದು ಹೊಸ ಬೆಳವಣಿಗೆಯಲ್ಲ ಎಂದಿರುವ ಅವರು, ಹಿಂದೆ ಅಧಿಕಾರಿಗಳ ನಡುವೆ ನಡೆದ ಘರ್ಷಣೆ ರಾಜಕಾರಣವಾಗಿತ್ತು ಎಂದು ನೆನಪಿಸಿದ್ದಾರೆ. ಮಾಧ್ಯಮಗಳಲ್ಲಿ ಎಲ್ಲಾ ಮಾಹಿತಿ ಲಭ್ಯವಿರುವಾಗ, ಗೃಹ ಸಚಿವರು ಘೋಷಿಸಿರುವ ತನಿಖೆ ಕೇವಲ ಸಮಯ ವ್ಯರ್ಥ ಎಂದು ಅವರು ಪ್ರಶ್ನಿಸಿದ್ದಾರೆ.

ಬೆಂಗಳೂರು, ನವೆಂಬರ್ 10: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಗ್ರರು, ಕ್ರಿಮಿನಲ್​ಗಳಿಗೆ ರಾಜಾತಿಥ್ಯದ ಬಗ್ಗೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ. ಇವರು ವಿಧಾನಸೌಧದಲ್ಲೇ ಭಯೋತ್ಪಾದಕರನ್ನು ಇಟ್ಟುಕೊಂಡಿದ್ದಾರೆ. ಹಾಗಿದ್ದ ಮೇಲೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಭಯೋತ್ಪಾದಕರ ಬಗ್ಗೆ ಮಾತನಾಡಿ ಏನು ಪ್ರಯೋಜನ ಎಂದು ಅವರು ಹೇಳಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ಈ ರೀತಿಯ ರಾಜಾತಿಥ್ಯ ಹೊಸದಲ್ಲ. ಈ ಹಿಂದೆ ಇಬ್ಬರು ಹಿರಿಯ ಜೈಲು ಅಧಿಕಾರಿಗಳ ನಡುವೆ ಜವಾಬ್ದಾರಿ ನಿರ್ವಹಣೆ ಮತ್ತು ವೈಫಲ್ಯಗಳ ವಿಷಯವಾಗಿ ದೊಡ್ಡ ಮಟ್ಟದ ರಾಜಕಾರಣ ನಡೆದಿತ್ತು ಎಂದು ಕುಮಾರಸ್ವಾಮಿ ನೆನಪಿಸಿದ್ದಾರೆ. ವಿಧಾನಸೌಧದಲ್ಲಿಯೇ ಟೆರರಿಸ್ಟ್‌ಗಳ ಇರುವಿಕೆ ಬಗ್ಗೆ ಚರ್ಚೆ ಇಲ್ಲದಿದ್ದಾಗ, ಜೈಲಿನಲ್ಲಿರುವ ಟೆರರಿಸ್ಟ್‌ಗಳ ಕುರಿತು ಮಾತನಾಡುವುದೇಕೆ ಎಂದು ಅವರು ಪ್ರಶ್ನಿಸಿದ್ದಾರೆ.

ಗೃಹ ಸಚಿವ ಪರಮೇಶ್ವರ್ ಅವರು ಈ ಕುರಿತು ತನಿಖೆ ನಡೆಸುವುದಾಗಿ ಹೇಳಿದ್ದಾರೆ. ಆದರೆ, ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಈಗಾಗಲೇ ಮಾಧ್ಯಮಗಳಲ್ಲಿ ವರದಿಗಳು ಮತ್ತು ವಿಡಿಯೋಗಳು ಪ್ರಸಾರವಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೊಂದು ತನಿಖೆ ನಡೆಸುವುದು ಕೇವಲ ಕಾಲಹರಣ ಮತ್ತು ವಿಷಯವನ್ನು ಮರೆಮಾಚುವ ಯತ್ನ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ವಾಸ್ತವ ಏನೆಂಬುದು ರಾಜ್ಯದ ಜನತೆಯ ಮುಂದೆಯೇ ಇದ್ದಾಗ, ಹೊಸ ತನಿಖೆಯ ಅಗತ್ಯವೇನು ಎಂದು ಅವರು ಪ್ರಶ್ನಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ