ವೃತ್ತಿಯಲ್ಲಿ ವೈದ್ಯನಾಗಿರುವ ಹೆಚ್ ಡಿ ರೇವಣ್ಣ ಮಗ ಡಾ ಸೂರಜ್ ರೇವಣ್ಣ ರೂ. 65 ಕೋಟಿ ಆಸ್ತಿಗೆ ಒಡೆಯನಾಗಿದ್ದಾರೆ
ವೃತ್ತಿಯಲ್ಲಿ ವೈದ್ಯನಾಗಿರುವ ಸೂರಜ್ ಅವರ ಹೆಸರಲ್ಲಿ ರೂ. 3.53 ಕೋಟಿ ಚರಾಸ್ತಿ ಮತ್ತು ರೂ. 61.68 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ.
ನನ್ನ ತಾತ ರಾಜಕಾರಣಿ, ನನ್ನಪ್ಪನೂ ಅದೇ, ಅವರು ತುಳಿದ ದಾರಿಯಲ್ಲೇ ನಾನು ಸಹ ಸಾಗುವೆ; ಭಾರತದ ಕೆಲ ರಾಜಕಾರಣ ಕುಟುಂಬಗಳಿಗೆ ಈ ಮಾತು ವೇದವಾಕ್ಯವಾಗಿದೆ. ನೆಹರೂ ಕುಟುಂಬ, ಗೌಡರ ಕುಟುಂಬ, ಠಾಕ್ರೆ ಕುಟುಂಬ-ಹೀಗೆ ಹಲವಾರು ಕುಟುಂಬಗಳನ್ನು ನಾವು ಹೆಸರಿಸುತ್ತಾ ಹೋಗಬಹುದು. ಇದನ್ನು ಯಾಕೆ ಹೇಳಬೇಕಾಗಿದೆ ಅಂದರೆ ಮಾಜಿ ಪ್ರಧಾನ ಮಂತ್ರಿ ದೇವೇಗೌಡರ ಕುಟುಂಬದ ಮತ್ತೊಂದು ಕುಡಿ ಡಾ ಸೂರಜ್ ರೇವಣ್ಣ ಬುಧವಾರದಂದು ಹಾಸನ ಸ್ಥಾನಿಕ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯತ್ವಕ್ಕೆ ನಡೆಯಲಿರುವ ಚುನಾವಣೆಗೆ ನಾಮಪತ್ರವನ್ನು ಸಲ್ಲಿಸುವ ಮೂಲಕ ಅಧಿಕೃತವಾಗಿ ಸಕ್ರಿಯ ರಾಜಕೀಯಕ್ಕೆ ಧುಮುಕಿದ್ದಾರೆ. ನಿಮಗೆ ಗೊತ್ತಿದೆ, ಹೆಚ್ ಡಿ ರೇವಣ್ಣ ಮತ್ತು ಭವಾನಿ ಅವರ ಹಿರಿಯ ಮಗನಾಗಿರುವ ಸೂರಜ್ ಅವರ ಕಿರಿಯ ಸಹೋದರ ಪ್ರಜ್ವಲ್ ರೇವಣ್ಣ ಹಾಸನದ ಸಂಸದರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರ ಸ್ವಾಮಿಯವರು ತಮ್ಮ ಪುತ್ರ ನಿಖಿಲ್ ಕುಮಾರ ಸ್ವಾಮಿಯನ್ನು ರಾಜಕೀಯಕ್ಕೆ ತರುವ ವಿಫಲ ಪ್ರಯತ್ನ ಮಾಡಿದ್ದರು.
ವೃತ್ತಿಯಲ್ಲಿ ವೈದ್ಯನಾಗಿರುವ ಸೂರಜ್ ಅವರು ಕೇವಲ 33 ನೇ ವಯಸ್ಸಿಗೆ ಕೋಟಿಗಟ್ಟಲೆ ಆಸ್ತಿ ಸಂಪಾದಿಸಿದ್ದಾರೆ. ನಾಮಪತ್ರದೊಂದಿಗೆ ಅವರಿಂದು ಸಲ್ಲಿಸಿರುವ ಆಸ್ತಿ ಕುರಿತ ಅಫಿಡವಿಟ್ ಪ್ರಕಾರ ಸುಮಾರು ರೂ. 65 ಕೋಟಿಗಳಿಗೂ ಹೆಚ್ಚು ಆಸ್ತಿಗೆ ಒಡೆಯನಾಗಿದ್ದಾರೆ.
ಅವರ ಹೆಸರಲ್ಲಿ ರೂ. 3.53 ಕೋಟಿ ಚರಾಸ್ತಿ ಮತ್ತು ರೂ. 61.68 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ಗಮನಿಸಬೇಕಾದ ಸಂಗತಿಯೇನೆಂದರೆ, ಡಾ ಸೂರಜ್ ತಮ್ಮ ತಾತ-ಅಜ್ಜಿ, ಅತ್ತೆಯಂದಿರು, ಹಾಗೂ ತಂದೆ-ತಾಯಿಗಳಿಂದ ಸುಮಾರು 15 ಕೋಟಿ ರೂ. ಸಾಲ ಪಡೆದಿದ್ದಾರೆ. ಅವರಲ್ಲಿ ಸುಮಾರು 46 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 18 ಕೆಜಿ ಬೆಳ್ಳಿಯಿದೆ.
2015ರಲ್ಲಿ ಜನರಲ್ ಸರ್ಜರಿಯಲ್ಲಿ ಎಮ್ ಎಸ್ ವ್ಯಾಸಂಗವನ್ನು ಪೂರ್ತಿಗೊಳಿಸಿದ ಡಾ ಸೂರಜ್ 36 ಆಕಳು ಮತ್ತು 8 ದನಗಳನ್ನು ಸಹ ಹೊಂದಿದ್ದಾರೆ.
ತಮ್ಮ ಪತ್ನಿಯ ಹೆಸರಲ್ಲಿರುವ ಆಸ್ತಿಯನ್ನು ಸೂರಜ್ ಬಹಿರಂಗಪಡಿಸಿಲ್ಲ.