ಕುಂದಾನಗರಿಯಲ್ಲಿ ವರುಣನ ಅಬ್ಬರ; ಮನೆಗೆ ನುಗ್ಗಿದ ಮಳೆ ನೀರು, ಊಟ-ನಿದ್ದೆ ಇಲ್ಲದೆ ಜನರ ಪರದಾಟ
ಬೆಳಗಾವಿಯ ಗಣೇಶ್ ಕಾಲೋನಿಯಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದೆ. ನೇಕಾರರ ಮನೆಗಳಿಗೂ ನೀರು ನುಗ್ಗಿದ್ದು, ಮಗ್ಗಗಳೆಲ್ಲವೂ ನೀರು ಪಾಲಾಗಿವೆ. ಊಟ ನಿದ್ದೆ ಇಲ್ಲದೇ ಜನ ನೀರು ಹೊರ ಹಾಕುತ್ತಿದ್ದಾರೆ.
ಬೆಳಗಾವಿ, ಜುಲೈ 24: ಬೆಳಗಾವಿ ನಗರದಲ್ಲಿ ಧಾರಾಕಾರ ಮಳೆ ಹಿನ್ನೆಲೆ ಬಳ್ಳಾರಿ ನಾಲಾ ನೀರಿನ ಪ್ರಮಾಣ ಮತ್ತಷ್ಟು ಏರಿಕೆಯಾಗಿದೆ. ವಡಗಾಂವ ಬಳಿಯ ಯಳ್ಳೂರ ರಸ್ತೆಯಲ್ಲಿರುವ ಗಣಪತಿ ದೇವಸ್ಥಾನ ಜಲಾವೃತಗೊಂಡಿದೆ. ಇನ್ನೊಂದು ದಿನ ಮಳೆಯಾದ್ರೇ ಬೆಳಗಾವಿ ಯಳ್ಳೂರ ಸಂಪರ್ಕ ಕಡಿತಗೊಳ್ಳಲಿದೆ. ರಸ್ತೆ ಮೇಲೆ ಬಳ್ಳಾರಿ ನಾಲಾ ನೀರು ಬರಲು ಅರ್ಧ ಅಡಿಯಷ್ಟು ಮಾತ್ರ ಬಾಕಿ ಇದ್ದು ವಡಗಾಂವ ಬಳಿಯ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತ ಜಲಾವೃತಗೊಳ್ಳಲಿದೆ.
ಇನ್ನು ಮತ್ತೊಂದೆಡೆ ಬೆಳಗಾವಿಯ ಗಣೇಶ್ ಕಾಲೋನಿಯಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದೆ. ನೇಕಾರರ ಮನೆಗಳಿಗೂ ನೀರು ನುಗ್ಗಿದ್ದು, ಮಗ್ಗಗಳೆಲ್ಲವೂ ನೀರು ಪಾಲಾಗಿವೆ. ಊಟ ನಿದ್ದೆ ಇಲ್ಲದೇ ಜನ ನೀರು ಹೊರ ಹಾಕುತ್ತಿದ್ದಾರೆ. ತಿನ್ನಲು ಕೂಡ ಏನೂ ಇಲ್ಲ ಯಾರಾದರೂ ಸಹಾಯ ಮಾಡಿದ್ರೇ ಅನುಕೂಲ ಆಗುತ್ತೆ ಎಂದು ಸುನಂದಾ ಮುಳಗುಂದ ಬಳಿ ಟಿವಿ9 ಬಳಿ ಅಳಲು ತೋಡಿಕೊಂಡಿದ್ದಾರೆ. ಗಣೇಶ್ ಕಾಲೋನಿಯಲ್ಲಿ ಮತ್ತೊಂದು ಮನೆಗೆ ನೀರು ನುಗ್ಗಿ ಅವಾಂತರವಾಗಿದೆ. ರಾತ್ರಿಯಿಡೀ ಕಾಟ್ ಮೇಲೆ ಕುಳಿತು ಕುಟುಂಬಸ್ಥರು ರಾತ್ರಿ ಕಳೆದಿದ್ದಾರೆ. ಅರ್ಧ ಅಡಿಯಷ್ಟು ನೀರು ಬಂದು ಮನೆಯ ಸಾಮಾಗ್ರಿಗಳೆಲ್ಲವೂ ನೀರು ಪಾಲಾಗಿವೆ.