ಬೆಂಗಳೂರು ಸೇರಿ ಕರ್ನಾಟಕದ ವಿವಿಧೆಡೆ ಭಾರಿ ಮಳೆ: ಎಲ್ಲೆಲ್ಲಿ ಏನೇನಾಯ್ತು ನೋಡಿ

Updated on: Sep 19, 2025 | 7:32 AM

Bengaluru Rains and Karnataka rains: ಕೆಲವು ದಿನಗಳಿಂದ ತುಸು ಬಿಡುವು ನೀಡಿದ್ದ ಮಳೆ ಮತ್ತೆ ಅಬ್ಬರಿಸಲು ಶುರು ಮಾಡಿದೆ. ಮೆಜೆಸ್ಟಿಕ್, ಕೆಆರ್ ಮಾರ್ಕೆಟ್, ಗಿರಿನಗರ, ನಂಜಪ್ಪ ಸರ್ಕಲ್ ಸೇರಿದಂತೆ ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ಗುರುವಾರ ರಾತ್ರಿಯಿಡೀ ಮಳೆ ಸುರಿದಿದೆ. ಅತ್ತ ಧಾರವಾಡ, ಬಾಗಲಕೋಟೆ, ಯಾದಗಿರಿಯಲ್ಲಿಯೂ ಭಾರಿ ಮಳೆ ಸುರಿದಿದೆ.

ಬೆಂಗಳೂರು, ಸೆಪ್ಟೆಂಬರ್ 19: ಬೆಂಗಳೂರು, ಧಾರವಾಡ, ಬಾಗಲಕೋಟೆ, ಯಾದಗಿರಿ ಸೇರಿದಂತೆ ಕರ್ನಾಟಕದ ವಿವಿಧೆಡೆ ಮತ್ತೆ ಮಳೆ ಆರ್ಭಟ ಜೋರಾಗಿದೆ. ಬೆಂಗಳೂರು ನಗರದಾದ್ಯಂತ ಗುರುವಾರ ರಾತ್ರಿ ಭಾರಿ ಮಳೆ ಸುರಿದಿದ್ದು, ರಾತ್ರಿ ಇಡೀ ಜಿಟಿಜಿಟಿ ಮಳೆಯಾಗಿದೆ. ಧಾರಾಕಾರ ಮಳೆಗೆ ಬಾಗಲಕೋಟೆ ಜಿಲ್ಲೆ ಬಾದಾಮಿಯ ಐತಿಹಾಸಿಕ ಅಗಸ್ತ್ಯತೀರ್ಥ ಹೊಂಡ ತುಂಬಿ ಹರೀತಿದೆ. ಅಕ್ಕ ತಂಗಿ ಪಾಲ್ಸ್​ಗೆ ಜೀವಕಳೆ ಬಂದಿದೆ. ಯಾದಗಿರಿ ಜಿಲ್ಲೆಯಲ್ಲಿ ಮಳೆಗೆ, ವಡಗೇರ ತಾಲೂಕಿನ ಕಾಡಂಗೇರ ಗ್ರಾಮ ಜಲಾವೃತಗೊಂಡಿದೆ. ಗ್ರಾಮದ ಹಲವು ರಸ್ತೆಗಳು ಜಲಮಯವಾಗಿದ್ದು, ಶಾಲೆಯಿಂದ‌ ಮನೆಗೆ ಹೋಗಲು ವಿದ್ಯಾರ್ಥಿಗಳು ಪರದಾಡಿದ್ದಾರೆ.

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ತಡಹಾಳ ಗ್ರಾಮದಲ್ಲಿ ತಾತ್ಕಾಲಿಕ ರಸ್ತೆಯಲ್ಲಿ ಲಾರಿ ಸಿಲುಕಿಕೊಂಡಿದೆ. ಮಣ್ಣಿನಲ್ಲಿ ಸಿಲುಕಿದ ಲಾರಿಯಿಂದ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಜೆಸಿಬಿ ಮೂಲಕ ಲಾರಿ ತೆರವಿಗೆ ಹರಸಾಹಸ ಪಡಬೇಕಾಯಿತು. ಬೆಣ್ಣೆಹಳ್ಳಕ್ಕೆ ನಿರ್ಮಿಸಿರುವ ಸೇತುವೆ ಸತತ 1 ತಿಂಗಳಿಂದ ಕುಸಿಯುತ್ತಲೇ ಇದ್ದು, ಸವಾರರು ಹೈರಾಣಾಗಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ