ಕಾಡಾನೆ ಓಡಿಸಲೂ ಬಂತು AI ಕ್ಯಾಮರಾ: ಹೇಗೆ ಕೆಲಸ ಮಾಡುತ್ತೆ ಗೊತ್ತಾ?
ಮೈಸೂರು ಜಿಲ್ಲೆಯ ನಾಗರಹೊಳೆ ಅರಣ್ಯ ಗಡಿಗಳಲ್ಲಿ ಹೆಚ್ಚಿದ ಕಾಡಾನೆ ಹಾವಳಿ ತಡೆಯಲು ಅರಣ್ಯ ಇಲಾಖೆ AI ಆಧಾರಿತ ಧ್ವನಿವರ್ಧಕ ಸಹಿತ ಕ್ಯಾಮರಾಗಳನ್ನು ಅಳವಡಿಸಿದೆ. ಈ ಕ್ಯಾಮರಾಗಳು ಆನೆಗಳನ್ನು 150 ಮೀ ದೂರದಿಂದ ಗುರುತಿಸಿ, ವಿಭಿನ್ನ ಶಬ್ದ ಮಾಡುವ ಮೂಲಕ ಓಡಿಸುತ್ತವೆ. ಈ ಪ್ರಯೋಗ ಯಶಸ್ವಿಯಾಗಿದ್ದು, ಇತರ ಅರಣ್ಯ ಪ್ರದೇಶಗಳ ಗಡಿಗಳಿಗೂ ವಿಸ್ತರಿಸಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ.
ಮೈಸೂರು, (ಡಿಸೆಂಬರ್ 23): ಇತ್ತೀಚೆಗೆ ಮೈಸೂರು (Mysuru) ಜಿಲ್ಲೆಯಲ್ಲಿ ಮಾವನ-ಕಾಡು ಪ್ರಾಣಿ ಸಂಘರ್ಷ ಹೆಚ್ಚಾಗಿದೆ. ನಾಗರಹೊಳೆ ಅರಣ್ಯ ಪ್ರದೇಶದ ಗಡಿ ಭಾಗದಲ್ಲಿ ಕಾಡಾನೆ (Wild Elephant) ಹಾವಳಿ ಹೆಚ್ಚಾಗಿದ್ದು, ಹಲವು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ಆನೆಗಳ ಉಪಟಳ ನಿಂತಿಲ್ಲ. ಇದರಿಂದ ಜನಸಾಮಾನ್ಯರು, ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಹೀಗಾಗಿ ಅರಣ್ಯ ಇಲಾಖೆಯು, ಕಾಡಾನೆ ಹಾವಳಿ ತಡೆಯಲು ಒಂದು ವಿನೂತನ ವಿಧಾನವೊಂದನ್ನು ಕಂಡುಕೊಂಡಿದ್ದು, ಬಹುತೇಕ ಯಶಸ್ವಿಯಾಗಿದೆ. ಹೌದು.. ನಾಗರಹೊಳೆ ಅರಣ್ಯ ಗಡಿಗಳಲ್ಲಿ ಕಾಡಾನೆಗಳನ್ನು ಓಡಿಸಲು ಎಐ (ಕೃತಕ ಬುದ್ಧಿಮತ್ತೆ) ಆಧಾರಿತ ಕ್ಯಾಮರಾಗಳನ್ನು ಧ್ವನಿವರ್ಧಕಗಳ ಜತೆ ಪ್ರಾಯೋಗಿಕವಾಗಿ ಅಳವಡಿಸಲಾಗಿದೆ. ಈ ಕ್ಯಾಮರಾಗಳು ಕಾಡಾನೆಗಳು ಸುಮಾರು 150 ಮೀಟರ್ ದೂರದಲ್ಲಿದ್ದಾಗಲೇ ಅವುಗಳನ್ನು ಗುರುತಿಸಿ, ಜೋರಾಗಿ ಶಬ್ದಗಳನ್ನು ಮಾಡುವ ಮೂಲಕ ಅವುಗಳನ್ನು ಓಡಿಸುತ್ತಿವೆ. ಇನ್ನು ಈ ಎಐ ಹೇಗೆ ಕಾರ್ಯನಿರ್ವಹಿಸುತ್ತೆ ಎನ್ನುವುದನ್ನ ಮೈಸೂರು ಅರಣ್ಯ ವಲಯದ ಡಿಸಿಎಫ್ ಪರಮೇಶ್ ಅವರು ವಿವರಿಸಿದ್ದಾರೆ.
