ಹುಬ್ಬಳ್ಳಿ-ಧಾರವಾಡ ಪೊಲೀಸರ ಬಿಗ್ ಆಪರೇಷನ್: 6 ಮಂದಿ ಖತರ್ನಾಕ್ ಗಾಂಜಾ ಪೆಡ್ಲರ್‌ಗಳ ಬಂಧನ
ಹುಬ್ಬಳ್ಳಿ-ಧಾರವಾಡದಲ್ಲಿ ಗಾಂಜಾ ಮಾರಾಟದ ಹಾವಳಿ ಹೆಚ್ಚಾಗಿದ್ದು, ಪೊಲೀಸರು ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದಾರೆ. ಇತ್ತೀಚೆಗೆ ಆರು ಜನ ಗಾಂಜಾ ಮಾರಾಟಗಾರರನ್ನು ಬಂಧಿಸಿ, ಗಾಂಜಾ ಜಪ್ತಿ ಮಾಡಲಾಗಿದೆ. ಈ ಕ್ರಮಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ, ಗಾಂಜಾ ಪೂರೈಕೆಯ ಮೂಲವನ್ನೂ ಪತ್ತೆ ಹಚ್ಚುವಂತೆ ಜನ ಆಗ್ರಹಿಸಿದ್ದಾರೆ.
ಧಾರವಾಡ, ನ.5: ಜಿಲ್ಲೆಯಲ್ಲಿ ಗಾಂಜಾ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿತ್ತು. ಗಾಂಜಾ ಮತ್ತಿನಲ್ಲಿ ನಡೆಯುತ್ತಿದ್ದ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಹುಬ್ಬಳ್ಳಿ-ಧಾರವಾಡ ಪೊಲೀಸರು ಗಾಂಜಾ ಮಾರಾಟಗಾರರ ವಿರುದ್ಧ ಸಮರ ಸಾರಿ, ಅವರ ಪತ್ತೆಗೆ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಳೆದ ಎರಡು ದಿನಗಳಲ್ಲಿ, ಧಾರವಾಡ ವಿದ್ಯಾಗಿರಿ ಮತ್ತು ಹುಬ್ಬಳ್ಳಿ ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಬರೊಬ್ಬರಿ ಆರು ಜನ ಗಾಂಜಾ ಮಾರಾಟಗಾರರನ್ನು ಬಂಧಿಸಿದ್ದಾರೆ. ಬಂಧಿತರಿಂದ ಗಾಂಜಾವನ್ನು ಕೂಡ ಜಪ್ತಿ ಮಾಡಲಾಗಿದೆ. ಹಿಂದಿನ ಪೊಲೀಸ್ ಆಯುಕ್ತ ಶಶಿಕುಮಾರ್ ಅವರ ಅವಧಿಯಲ್ಲಿ ಗಾಂಜಾ ಸೇವನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಪ್ರಸ್ತುತ ಆಯುಕ್ತ ಭೂಷಣ್ ಬೋರಸೆ ಅವರು ಮಾರಾಟಗಾರರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ಮಾರಾಟಕ್ಕೆ ಬ್ರೇಕ್ ಹಾಕಿದರೆ, ಸುಲಭವಾಗಿ ಗಾಂಜಾ ಸಿಗುವುದಿಲ್ಲ ಎಂಬುದು ಪೊಲೀಸರ ಉದ್ದೇಶ. ಯುವಕರು ಗಾಂಜಾ ಸೇವನೆಗೆ ಬಲಿಯಾಗುವುದನ್ನು ತಡೆಯಲು ಈ ಕ್ರಮಗಳು ಸಹಕಾರಿಯಾಗಿದ್ದು, ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
