ಪತ್ನಿ ಎಲ್ಲಿದ್ದರೂ ಪತಿಗೆ ಗೊತ್ತಾಗ್ತಿತ್ತು ಲೊಕೇಷನ್! ಹೆಂಡ್ತಿ ಮೊಬೈಲ್​ಲಿ ಮಾಲ್ವೇರ್ ಅಳವಡಿಸಿದ್ದಾತನ ವಿರುದ್ಧ ಪೊಲೀಸರಿಗೆ ದೂರು

Edited By:

Updated on: Jan 27, 2026 | 12:59 PM

ಬೆಂಗಳೂರಿನಲ್ಲಿ, ಪ್ರತ್ಯೇಕವಾಗಿದ್ದ ಪತ್ನಿಯ ಮೊಬೈಲ್‌ನಲ್ಲಿ ಪತಿ ಮಾಲ್ವೇರ್ ಆ್ಯಪ್ ಅಳವಡಿಸಿ ಆಕೆಯ ಚಲನವಲನಗಳನ್ನು ಟ್ರ್ಯಾಕ್ ಮಾಡುತ್ತಿದ್ದುದು ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಮಗು ನೋಡುವ ನೆಪದಲ್ಲಿ ಬರುತ್ತಿದ್ದ ಪತಿ ಮೊಬೈಲ್​ನಲ್ಲಿ ಮಾಲ್ವೇರ್ ಅಳವಡಿಸಿದ್ದ. ಈ ಖಾಸಗಿತನದ ಹಕ್ಕಿನ ಉಲ್ಲಂಘನೆಯನ್ನು ಪತ್ತೆ ಹಚ್ಚಿದ ಪತ್ನಿ, ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೆಂಗಳೂರು, ಜನವರಿ 27: ಗಂಡ-ಹೆಂಡತಿ ಇಬ್ಬರೂ ದೂರವಾಗಿದ್ದರು. ಆದರೆ, ಮಗುವನ್ನು ನೋಡಲು ಪತ್ನಿ ಮನೆಗೆ ಹೋಗಲು ಪತಿಗೆ ನ್ಯಾಯಾಲಯ ಅನುಮತಿ ಕೊಟ್ಟಿತ್ತು. ಹೀಗೆ ಆಕೆಯ ಮನೆಗೆ ತೆರಳುತ್ತಿದ್ದ ಪತಿ ಮಗು ನೋಡುವ ನೆಪದಲ್ಲಿ ಪತ್ನಿಯ ಮೊಬೈಲ್‌ನಲ್ಲಿ ಮಾಲ್ವೇರ್ ಆ್ಯಪ್ ಅಳವಡಿಸಿ ಆಕೆಯ ಚಲನವಲನಗಳನ್ನು ಟ್ರ್ಯಾಕ್ ಮಾಡುತ್ತಿದ್ದ. ಇದೀಗ ಪತಿಯ ವಿರುದ್ಧ ಪತ್ನಿ ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಕೌಟುಂಬಿಕ ಕಲಹದಿಂದ ಪತಿ-ಪತ್ನಿ ದೂರವಾಗಿದ್ದು, ನ್ಯಾಯಾಲಯದ ಆದೇಶದಂತೆ ಪತಿ ಅಮೇಲ್ ವಿ. ನಾಯರ್ ಅವರಿಗೆ ವಾರಕ್ಕೊಮ್ಮೆ ಮಗುವನ್ನು ನೋಡಲು ಅವಕಾಶವಿತ್ತು. ಈ ಅವಕಾಶವನ್ನು ದುರುಪಯೋಗಪಡಿಸಿಕೊಂಡ ಪತಿ, ಮಗುವನ್ನು ನೋಡಲು ಬಂದಾಗ ಪತ್ನಿಯ ಮೊಬೈಲ್‌ಗೆ ಗುಪ್ತವಾಗಿ ಒಂದು ಅಪ್ಲಿಕೇಶನ್ ಅನ್ನು ಇನ್​ಸ್ಟಾಲ್ ಮಾಡಿದ್ದಾರೆ. ಈ ಮಾಲ್ವೇರ್ ಆ್ಯಪ್ ಮೂಲಕ ಪತ್ನಿ ಎಲ್ಲೇ ಹೋದರೂ, ಆಕೆಯ ಸ್ಥಳದ ಮಾಹಿತಿ ಪತಿಯ ಮೊಬೈಲ್‌ಗೆ ಸಂದೇಶದ ರೂಪದಲ್ಲಿ ತಲುಪುತ್ತಿತ್ತು.

ಪತ್ನಿ ಹೋಗುವ ಸ್ಥಳಗಳು ಮತ್ತು ಚಟುವಟಿಕೆಗಳ ಬಗ್ಗೆ ನಿರಂತರವಾಗಿ ಮಾಹಿತಿ ಪಡೆಯುತ್ತಿದ್ದರು. ಒಂದು ದಿನ, ಮೊಬೈಲ್ ಆ್ಯಪ್‌ನ ಅಪ್‌ಡೇಟ್ ಸಂದೇಶ ಬಂದಾಗ, ಪತಿಯ ಈ ಕೃತ್ಯ ಪತ್ನಿಗೆ ಗೊತ್ತಾಗಿದೆ. ತಮ್ಮ ಖಾಸಗಿತನದ ಉಲ್ಲಂಘನೆ ಎಂದು ಅರಿತ ಪತ್ನಿ ತಕ್ಷಣ ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ