ನಿಮಗಿಂತ ಹೆಚ್ಚೇ ವಿದ್ಯಾವಂತ; ಟ್ರಾಫಿಕ್ ಜಾಮ್ ಮಾಡಿದ ಬಿಜೆಪಿ ಎಂಎಲ್‌ಸಿ ಮಗನಿಗೆ ಟ್ರಾಫಿಕ್ ಪೊಲೀಸ್ ಕ್ಲಾಸ್

Updated on: Aug 12, 2025 | 10:36 PM

ಹತ್ರಾಸ್‌ನಲ್ಲಿ ಟ್ರಾಫಿಕ್ ಜಾಮ್‌ಗೆ ಕಾರಣವಾದ ಕಾರನ್ನು ಸ್ಥಳಾಂತರಿಸಲು ನಿರಾಕರಿಸಿದ ನಂತರ ಬಿಜೆಪಿ ಎಂಎಲ್‌ಸಿಯ ಮಗನಿಗೆ ಉತ್ತರ ಪ್ರದೇಶದ ಟ್ರಾಫಿಕ್ ಪೊಲೀಸ್ ಕ್ಲಾಸ್ ತೆಗೆದುಕೊಂಡಿದ್ದಾರೆ. 'ನಾನು ನಿಮಗಿಂತ ಹೆಚ್ಚೇ ವಿದ್ಯಾವಂತ' ಎಂದು ಅವರು ಹೇಳಿದ್ದಾರೆ. ಅಧಿಕಾರದ ದುರುಪಯೋಗದ ಆರೋಪದ ಮೇಲೆ ಉತ್ತರ ಪ್ರದೇಶದ ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ಬಿಜೆಪಿ ಎಂಎಲ್‌ಸಿಯ ಮಗನನ್ನು ಎದುರಿಸುತ್ತಿರುವ ವೀಡಿಯೊ ವೈರಲ್ ಆಗಿದ್ದು, ರಾಜಕೀಯ ಒತ್ತಡದ ವಿರುದ್ಧ ಅಧಿಕಾರಿಯ ಶಾಂತ ಮತ್ತು ಧೈರ್ಯಶಾಲಿ ನಿಲುವಿಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

ಹತ್ರಾಸ್, ಆಗಸ್ಟ್ 12: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ (Hathras) ಬಿಜೆಪಿ ಎಂಎಲ್‌ಸಿಯ ಮಗ ಮತ್ತು ಟ್ರಾಫಿಕ್ ಪೊಲೀಸ್ ನಡುವಿನ ತೀವ್ರ ಘರ್ಷಣೆ ವೈರಲ್ (Viral Video) ಆಗಿದೆ. ರಾಜಕೀಯ ಒತ್ತಡಕ್ಕೆ ಹೆದರದೆ ಧೈರ್ಯವಾಗಿ ಎಂಎಲ್​ಸಿ ಮಗನಿಗೆ ಕ್ಲಾಸ್ ತೆಗೆದುಕೊಂಡ ಪೊಲೀಸ್ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಬಿಜೆಪಿ ಧ್ವಜ ಮತ್ತು ಎಂಎಲ್​ಸಿ ಎಂಬ ಬೋರ್ಡ್ ಹೊಂದಿರುವ ರಾಜಕಾರಣಿಯ ಕಾರು ಜನಸಂದಣಿ ಇರುವ ರಸ್ತೆಯಲ್ಲಿ ನಿಂತಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ಅವರು ಪೊಲೀಸರ ಜೊತೆ ವಾಗ್ವಾದ ನಡೆಸಿದ್ದರು. ಆ ಕಾರನ್ನು ಬೇರೆಡೆ ನಿಲ್ಲಿಸಲು ಟ್ರಾಫಿಕ್ ಪೊಲೀಸ್ ಸೂಚಿಸಿದರು. ಆದರೆ, ಅಲಿಗಢದ ಬಿಜೆಪಿ ಎಂಎಲ್‌ಸಿ ರಿಷಿಪಾಲ್ ಸಿಂಗ್ ಅವರ ಪುತ್ರ ಚೌಧರಿ ತಪೇಶ್ ಎಂಬ ವ್ಯಕ್ತಿ ದುರಹಂಕಾರದಿಂದ ಆ ಟ್ರಾಫಿಕ್ ಪೊಲೀಸ್​​ಗೆ “ಪಕ್ಕಕ್ಕೆ ಸರಿಯಿರಿ”, “ಇಲ್ಲಿಂದ ಹೊರಡಿ” ಎಂದು ಆದೇಶಿಸಿದರು. ಇದರಿಂದ ಕೋಪಗೊಂಡ ಪೊಲೀಸ್ ಕಾನ್ಸ್​ಟೆಬಲ್ “ನೀವು ಟ್ರಾಫಿಕ್ ಜಾಮ್ ಮಾಡುತ್ತಿದ್ದೀರಿ. ಅಷ್ಟೇ ಅಲ್ಲದೆ ಪೊಲೀಸ್ ಜೊತೆಗೆ ನೀವು ಅಸಭ್ಯವಾಗಿ ವರ್ತಿಸುತ್ತಿದ್ದೀರಿ. ಸರ್ಕಾರಿ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ನೀವು ನಿಮ್ಮ ತಂದೆಯ ಹೆಸರಿಗೆ ಅವಮಾನ ತರುತ್ತಿದ್ದೀರಿ. ನಾನು ನಿಮಗಿಂತ ಎರಡು ಪಟ್ಟು ಹೆಚ್ಚು ವಿದ್ಯಾವಂತ. ಸರಿಯಾಗಿ ಮಾತನಾಡುವುದು ನನಗೆ ತಿಳಿದಿದೆ” ಎಂದು ಸಮಾಧಾನದಿಂದಲೇ ಕ್ಲಾಸ್ ತೆಗೆದುಕೊಂಡಿರುವ ವಿಡಿಯೋ ವೈರಲ್ ಆಗಿದೆ. ವಿಐಪಿ ಸಂಸ್ಕೃತಿ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದು, ಟ್ರಾಫಿಕ್ ಪೊಲೀಸ್​ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ