ಬಿಜೆಪಿ ಜೊತೆ ಕೆಆರ್​ಪಿಪಿಯನ್ನು ವಿಲೀನಗೊಳಿಸುವ ದೂರದ ಯೋಚನೆಯೂ ನನ್ನ ಮನಸ್ಸಲ್ಲಿ ಸುಳಿಯದು: ಗಾಲಿ ಜನಾರ್ಧನ ರೆಡ್ಡಿ

|

Updated on: Nov 25, 2023 | 6:27 PM

ಯಡಿಯೂರಪ್ಪನವರು ಡಿಕೆ ಶಿವಕುಮಾರ್ ಅಕ್ರಮ ಗಳಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿದ್ದು ದ್ವೇಷದ ರಾಜಕಾರಣ ಅಂತ ಕಾಂಗ್ರೆಸ್ ನಾಯಕರು ಹೇಳುವುದಾದರೆ, ಹಿಂದೆ ಬಳ್ಳಾರಿ ಗಣಿಗಾರಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ತಮ್ಮ ವಿರುದ್ಧ ಸಿಬಿಐ ತನಿಖೆ ಆದೇಶಿಸಿದ್ದು ಕೂಡ ದ್ವೇಷದ ರಾಜಕಾರಣವೇ ಅಂತ ಜನಾರ್ಧನ ರೆಡ್ಡಿ ಹೇಳುತ್ತಾರೆ.  

ಬೆಂಗಳೂರು: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ (KRPP) ಸಂಸ್ಥಾಪಕ ಮತ್ತು ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ (Gali Janardhan Reddy) ಅವರಿಗೆ ಬಿಜೆಪಿ ಬಗ್ಗೆ ಸಂಪೂರ್ಣವಾಗಿ ಭ್ರಮನಿರಸನವಾದಂತಿದೆ. ಇವತ್ತು ಬೆಂಗಳೂರಲ್ಲಿ ಟಿವಿ9 ಕನ್ನಡ ವಾಹಿನಿ ವರದಿಗಾರನೊಂದಿಗೆ ಮಾತಾಡಿದ ಅವರು ತಮ್ಮ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸುವುದು ಸಾಧ್ಯವೇ ಇಲ್ಲ ಎಂದು ಹೇಳಿದರು. ಅಂಥ ಯೋಚನೆಯೂ ತನ್ನ ಮನಸ್ಸಿನಲ್ಲಿ ಸುಳಿಯಲಾರದು ಎಂದು ಅವರು ಸ್ಪಷ್ಟವಾದ ಶಬ್ದಗಳಲ್ಲಿ ಹೇಳಿದರು. ಕಷ್ಟಕಾಲದಲ್ಲಿ ಪಕ್ಷ ತನ್ನ ನೆರವಿಗೆ ಬರಲಿಲ್ಲ ಎಂಬ ಅಸಮಾಧಾನ ಮತ್ತು ರೋಷ ಆವರಲ್ಲಿರಬಹುದು. ಹಾಗಾದರೆ ಅವರ ಅತ್ಯಂತ ಆಪ್ತರಾಗಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂಪ್ಪ (BS Yediyurappa) ಮತ್ತು ಅವರ ಜಿಗ್ರಿ ದೋಸ್ತ್ ಅಂತಲೇ ಗುರುತಿಸಿಕೊಂಡಿದ್ದ ಮಾಜಿ ಸಚಿವ ಬಿ ಶ್ರೀರಾಮುಲು ಅವರೊಂದಿಗಿನ ಸಂಬಂಧದ ಬಗ್ಗೆ ಕೇಳಿದಾಗ ಹಿರಿಯರಾದ ಯಡಿಯೂರಪ್ಪ ಅವರನ್ನು ತಂದೆಯ ಸ್ಥಾನದಲ್ಲಿಟ್ಟು ಗೌರವಿಸುತ್ತಿರುವುದಾಗಿ ರೆಡ್ಡಿ ಹೇಳಿದರು. ರಾಮುಲು ಅವರನ್ನು ಚಿಕ್ಕಂದಿನಿಂದ ನೋಡಿದ್ದು ಮತ್ತು ಕೆಳಮಟ್ಟದ ರಾಜಕೀಯದಲ್ಲಿ ಬೆಳೆದಿರುವುದನ್ನು ಕಂಡಿರುವುದರಿಂದ ಅವರು ಯಾವುದೇ ಪಕ್ಷದಲ್ಲಿದ್ದರೂ ನೆಮ್ಮದಿಯಿಂದ ಇರಲಿ ಅಂತ ಹಾರೈಸುತ್ತೇನೆ ಎಂದು ಜನಾರ್ಧನ ರೆಡ್ಡಿ ಹೇಳಿದರು.

 

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ