ನನಗೆ ವೋಟು ಬೇಕಿಲ್ಲ, ಜನ ಶಾಂತಿ ಮತ್ತು ನೆಮ್ಮದಿಯಿಂದ ಬದುಕುವುದು ಬೇಕು: ಕುಮಾರಸ್ವಾಮಿ
ನನಗೆ ವೋಟು ಮುಖ್ಯವಲ್ಲ, ಜನ ಶಾಂತಿ ಮತ್ತು ಸಮಾಧಾನದಿಂದ ಜೀವನ ನಡೆಸುವುದು ನನಗೆ ಬೇಕಾಗಿದೆ. ಈ ಜನ ಕೇಸರಿ ಬಟ್ಟೆ ತೊಟ್ಟು ಜನರ ನಡುವೆ ವಿಷಬೀಜ ಬಿತ್ತಿ ಅವರ ಬದುಕನ್ನು ಹಾಳು ಮಾಡಲು ನಾನು ಬಿಡುವುದಿಲ್ಲ. ಇನ್ನು ನಾನು ಮೌನವಾಗಿರಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ರಾಮನಗರ: ಮಾಜಿ ಮುಖ್ಯಮಂತ್ರಿ ಮತ್ತು ಜೆಡಿ(ಎಸ್) ನಾಯಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರು ಗುರುವಾರದಂದು ರಾಮನಗರದಲ್ಲಿ (Ramanagara) ಬಿಜೆಪಿ ಸರ್ಕಾರ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ವಿರುದ್ಧ ಅಕ್ಷರಶಃ ಬೆಂಕಿಯುಗುಳಿದರು. ಸರ್ಕಾರದ ಜೊತೆ ಅವರು ಕಾಂಗ್ರೆಸ್ ಪಕ್ಷವನ್ನೂ ತರಾಟೆಗೆ ತೆಗೆದುಕೊಂಡರು. ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಲಾಲ್ ಕಟ್ ಆಗಿರುವ ಮಾಂಸವನ್ನು ಖರೀದಿಸಬಾರದೆಂದು ಹಿಂದೂಗಳಿಗೆ ಸೂಚಿಸುವ ಕರಪತ್ರಗಳನ್ನು ಹಂಚುತ್ತಿರುವುದು ಕುಮಾರಸ್ವಾಮಿ ಅವರಿಗೆ ಕೋಪದಿಂದ ಭುಗಿಲೇಳುವಂತೆ ಮಾಡಿತ್ತು. ಜನ ಕೊರೋನಾ ವೈರಸ್ ನಿಂದ ಸೋಂಕಿತರಾಗಿ ಬೀದಿಗಳಲ್ಲಿ ಒದ್ದಾಡಿ ಸಾಯುವಂತೆ ಮಾಡಿದ ಅಯೋಗ್ಯ ಸರ್ಕಾರ ಇದು, ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್ ಇರಲಿಲ್ಲ, ಆಕ್ಸಿಜನ್ ಕೂಡ ಇರಲಿಲ್ಲ. ಆಗ ಎಲ್ಲಿದ್ದರು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದವರು? ಎಂದು ಕುಮಾರಸ್ವಾಮಿ ಕೇಳಿದರು.
ಸರಕಾರಕ್ಕೆ ಮತ್ತು ಬೊಮ್ಮಾಯಿ ಅವರಿಗೆ ಗಂಡಸ್ತನ ಇದ್ದರೆ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ನಿಲ್ಲಿಸಲಿ, ನಾವು ಮೌನವಾಗಿರುವುದನ್ನು ಅವರು ದೌರ್ಬಲ್ಯವೆಂದು ಪರಿಗಣಿಸಿರುವಂತಿದೆ. ಸಮಾಜಘಾತುಕ ಶಕ್ತಿಗಳು ಕರಪತ್ರಗಳನ್ನು ಹಂಚಿ ಸಮಾಜ ಒಡೆಯುವ ಕೆಲಸ ಮಾಡುತ್ತಿವೆ. ಯಾವ ಸಂವಿಧಾನವನ್ನು ಇವರು ಅನುಸರಿಸುತ್ತಾರೆ ಮತ್ತು ಗೌರವಿಸುತ್ತಾರೆ? ಸಂವಿಧಾನದ ಬಗ್ಗೆ ಗೌರವ ಇಲ್ಲದವರು ಡಾ ಬಿ ಅರ್ ಅಂಬೇಡ್ಕರ್ ಅವರು ಜಯಂತಿಯನ್ನು ಯಾಕೆ ಆಚರಿಸುತ್ತಾರೆ? ಎಂದು ಕುಮಾರಸ್ವಾಮಿಯವರು ಕೋಪದಿಂದ ಕುದಿಯುತ್ತಾ ಹೇಳಿದರು.
ನನಗೆ ವೋಟು ಮುಖ್ಯವಲ್ಲ, ಜನ ಶಾಂತಿ ಮತ್ತು ಸಮಾಧಾನದಿಂದ ಜೀವನ ನಡೆಸುವುದು ನನಗೆ ಬೇಕಾಗಿದೆ. ಈ ಜನ ಕೇಸರಿ ಬಟ್ಟೆ ತೊಟ್ಟು ಜನರ ನಡುವೆ ವಿಷಬೀಜ ಬಿತ್ತಿ ಅವರ ಬದುಕನ್ನು ಹಾಳು ಮಾಡಲು ನಾನು ಬಿಡುವುದಿಲ್ಲ. ಇನ್ನು ನಾನು ಮೌನವಾಗಿರಲ್ಲ. ಕಾಂಗ್ರೆಸ್ ಪಕ್ಷದವರು ಮಾತಾಡುವುದಿಲ್ಲ, ಮಾತಾಡಿದರೆ ಹಿಂದೂ ವೋಟುಗಳು ಹೋಗಿ ಬಿಡುತ್ತವೆ ಎನ್ನುವ ಭೀತಿ ಅವರನ್ನು ಆವರಿಸಿದೆ. ಮಾತಾಡುವ ಧೈರ್ಯ ಅವರು ಕಳೆದುಕೊಂಡಿದ್ದಾರೆ. ಆದರೆ ನನಗೆ ಜನರ ಬದುಕು ಮುಖ್ಯ ಎಂದು ಗುಡುಗುತ್ತಾರೆ ಕುಮಾರಸ್ವಾಮಿ.
ರಾಷ್ಟ್ರಕವಿ ಕುವೆಂಪು ಅವರ ಸಂದೇಶ ಹೇಳುವ ಹಾಗೆ ಸರ್ವಜನಾಂಗಗಳ ಶಾಂತಿಯ ತೋಟ ಇದು. ಹಿಂದೂ ಸಂಘಟನೆಗಳು ನಮ್ಮ ನಾಡಿನಲ್ಲಿ ಯಾಕೆ ಶಾಂತಿಯನ್ನು ಕದಡುತ್ತಿದ್ದಾರೆ, ಅದನ್ನೆಲ್ಲ ಉತ್ತರಪ್ರದೇಶಕ್ಕೆ ಸೀಮಿತಗೊಳಿಸಿಕೊಳ್ಳಲಿ ಎಂದು ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ ಪಕ್ಷ ಮತಾಂತರದ ಪರವಾಗಿ ಇದೆಯೇ, ತಾಕತ್ತಿದ್ದರೆ ಬಹಿರಂಗವಾಗಿ ಸ್ಪಷ್ಟಪಡಿಸಲಿ; ಸಿಟಿ ರವಿ ಸವಾಲ್