VIDEO: ನೋಡ್ಕೊಂಡು ಸುಮ್ಮನಿರಬೇಕಾ? ಕನ್ನಡಿಗನ ಪರ ನಿಂತ ಕನ್ನಡಿಗ

Updated on: Aug 02, 2025 | 11:04 AM

England vs India, 5th Test: ಲಂಡನ್​ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು ಪ್ರಥಮ ಇನಿಂಗ್ಸ್​ನಲ್ಲಿ 224 ರನ್​ಗಳಿಸಿ ಆಲೌಟ್ ಆಗಿದೆ. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಇಂಗ್ಲೆಂಡ್ ತಂಡವು 247 ರನ್​ಗಳಿಗೆ ಸರ್ವಪತನ ಕಂಡಿದೆ. ಇದೀಗ ಟೀಮ್ ಇಂಡಿಯಾ 23 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆಡುತ್ತಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಣ 5ನೇ ಟೆಸ್ಟ್ ಪಂದ್ಯದಲ್ಲಿ ಆಟಗಾರರ ನಡುವಣ ವಾಕ್ಸಮರ ಮುಂದುವರೆದಿದೆ. ಈ ಬಾರಿ ಮಾತಿನ ಚಕಮಕಿ ನಡೆಸಿರುವುದು ಟೀಮ್ ಇಂಡಿಯಾ ವೇಗಿ ಪ್ರಸಿದ್ಧ್ ಕೃಷ್ಣ ಹಾಗೂ ಜೋ ರೂಟ್. ಇಂಗ್ಲೆಂಡ್ ಇನ್ನಿಂಗ್ಸ್‌ನ 22ನೇ ಓವರ್‌ನಲ್ಲಿ ಜೋ ರೂಟ್ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ್ದರು.

ಜೋ ರೂಟ್ ಅವರ ಈ ಹೊಡೆತಗಳಿಂದ ಸಹನೆ ಕಳೆದುಕೊಂಡ ಪ್ರಸಿದ್ಧ್ ಕೃಷ್ಣ ಇಂಗ್ಲೆಂಡ್ ದಾಂಡಿಗನನ್ನು ಕೆಣಕಿದ್ದಾರೆ. ಇದರಿಂದ ಕೋಪಗೊಂಡ ರೂಟ್ ಟೀಮ್ ಇಂಡಿಯಾ ವೇಗಿ ಜೊತೆ ವಾಗ್ದಾಳಿ ನಡೆಸಿದರು. ಇತ್ತ ಕನ್ನಡಿಗನನ್ನು ರೂಟ್ ಗುರಿಯಾಗಿಸಿರುವುದನ್ನು ಗಮನಿಸಿದ ಕೆಎಲ್ ರಾಹುಲ್ ಮುಂದೆ ಬಂದರು.

ಅಲ್ಲದೆ ಜೋ ರೂಟ್ ಜೊತೆ ವಾಗ್ವಾದಕ್ಕೆ ಮುಂದಾಗುತ್ತಿದ್ದಂತೆ ಅಂಪೈರ್ ಕುಮಾರ್ ಧರ್ಮಸೇನ ತ್ವರಿತವಾಗಿ ಮಧ್ಯಪ್ರವೇಶಿಸಿದರು. ಅಲ್ಲದೆ ಕೆಎಲ್ ರಾಹುಲ್ ಜೊತೆ  ಜಗಳ ನಿಲ್ಲಿಸುವಂತೆ ಸೂಚಿಸಿದರು.

ಇದರಿಂದ ಕೋಪಗೊಂಡ ಕೆಎಲ್​​ಆರ್, ನಾವೇನು ಸುಮ್ಮನಿರಬೇಕೆಂದು ನೀವು ಬಯಸುತ್ತಿದ್ದೀರಾ? ಬ್ಯಾಟ್, ಬೌಲ್ ಮಾಡಿ ಮನೆಗೆ ಹೋಗಬೇಕಾ? ಎಂದು ಅಂಪೈರ್ ಕುಮಾರ್ ಧರ್ಮಸೇನ ಅವರನ್ನು ಪ್ರಶ್ನಿಸಿದರು.

ಕೆಎಲ್ ರಾಹುಲ್ ಹೀಗೆ ಕೋಪಗೊಳ್ಳಲು ಮುಖ್ಯ ಕಾರಣ, ಅಂಪೈರ್ ಟೀಮ್ ಇಂಡಿಯಾ ಆಟಗಾರರಿಗೆ ಸುಮ್ಮನಿರುವಂತೆ ಸೂಚನೆ ನೀಡಿದರು. ಅತ್ತ ಜೋ ರೂಟ್ ಜಗಳಕ್ಕಿಳಿದಿದ್ದರೂ, ಕುಮಾರ್ ಧರ್ಮಸೇನ ಕೆಎಲ್ ರಾಹುಲ್ ಅವರಿಗೆ ವಾಕ್ಸಮರ ನಿಲ್ಲಿಸುವಂತೆ ತಿಳಿಸಿದ್ದರು.

ಈ ವೇಳೆ ಸಿಟ್ಟುಗೊಂಡ ರಾಹುಲ್, ನಾವೇನು ಸುಮ್ಮನಿದ್ದು, ಬ್ಯಾಟ್, ಬೌಲ್ ಮಾಡಿ ಮನೆಗೆ ಹೋಗವುದನ್ನು ಬಯಸುತ್ತಿದ್ದೀರಾ? ಎಂದು ಅಂಪೈರ್ ವಿರುದ್ಧ ಆಕ್ರೋಶ ಹೊರಹಾಕಿದರು. ಇದೀಗ ಪ್ರಸಿದ್ಧ್ ಕೃಷ್ಣ ವಿಷಯದಲ್ಲಿ ಮುನ್ನುಗ್ಗಿ ಬಂದು ವಾಕ್ಸಮರಕ್ಕೆ ಇಳಿದ ಕನ್ನಡಿಗ ಕೆಎಲ್ ರಾಹುಲ್ ಅವರ ನಡೆಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಇನ್ನು ಲಂಡನ್​ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು ಪ್ರಥಮ ಇನಿಂಗ್ಸ್​ನಲ್ಲಿ 224 ರನ್​ಗಳಿಸಿ ಆಲೌಟ್ ಆಗಿದೆ. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಇಂಗ್ಲೆಂಡ್ ತಂಡವು 247 ರನ್​ಗಳಿಗೆ ಸರ್ವಪತನ ಕಂಡಿದೆ. ಇದೀಗ ಟೀಮ್ ಇಂಡಿಯಾ 23 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆಡುತ್ತಿದ್ದು, ದ್ವಿತೀಯ ದಿನದಾಟದ ಮುಕ್ತಾಯದ ವೇಳೆಗೆ ಭಾರತ ತಂಡ 2 ವಿಕೆಟ್ ಕಳೆದುಕೊಂಡು 75 ರನ್ ಕಲೆಹಾಕಿದೆ.