ಜಿಂಕೆಯ ವೇಗ, ಹದ್ದಿನ ಕಣ್ಣು… ನಿತೀಶ್ ಕುಮಾರ್ ರೆಡ್ಡಿ ಸೂಪರ್ ಕ್ಯಾಚ್
IND vs ENG 1st T20: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಯ ತಂಡ 132 ರನ್ ಗಳಿಸಿ ಆಲೌಟ್ ಆದರೆ, ಈ ಗುರಿಯನ್ನು ಟೀಮ್ ಇಂಡಿಯಾ ಕೇವಲ 12.5 ಚೇಸ್ ಮಾಡಿ, 7 ವಿಕೆಟ್ಗಳ ಗೆಲುವು ದಾಖಲಿಸಿದೆ.
ಕ್ರಿಕೆಟ್ನಲ್ಲಿ ಕ್ಯಾಚಸ್ ವಿನ್ ಮ್ಯಾಚಸ್ ಎಂಬ ಮಾತಿದೆ. ಅಂತಹದೊಂದು ಅದ್ಭುತ ಕ್ಯಾಚ್ ಹಿಡಿದು ನಿತೀಶ್ ಕುಮಾರ್ ರೆಡ್ಡಿ ಇದೀಗ ಎಲ್ಲರ ಗಮನ ಸೆಳೆದಿದ್ದಾರೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಭಾರತದ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಪರ ಜೋಸ್ ಬಟ್ಲರ್ ಒಬ್ಬರೇ ಅಬ್ಬರಿಸಿದ್ದರು.
ಅದರಲ್ಲೂ ಕೊನೆಯ ಹಂತದಲ್ಲಿ ಜೋಸ್ ಬಟ್ಲರ್ ಟೀಮ್ ಇಂಡಿಯಾ ಬೌಲರ್ಗಳಿಗೆ ಅಪಾಯಕಾರಿಯಾಗುವ ಸೂಚನೆ ನೀಡಿದ್ದರು. ವರುಣ್ ಚಕ್ರವರ್ತಿ ಎಸೆದ 17ನೇ ಓವರ್ನ ಮೊದಲ ಎಸೆತದಲ್ಲೇ ಬಟ್ಲರ್ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದರು.
ಈ ಸಿಡಿಲಬ್ಬರ ಮುಂದುವರೆಸಿ ಬೃಹತ್ ಮೊತ್ತ ಕಲೆಹಾಕಲು ಜೋಸ್ ಬಟ್ಲರ್ ನಿರ್ಧರಿಸಿದ್ದರು. ಅದರಂತೆ ವರುಣ್ ಎಸೆದ 2ನೇ ಎಸೆತದಲ್ಲಿ ಡೀಪ್ ಸ್ಕ್ವೇರ್ ಲೆಗ್‌ನತ್ತ ಬಾರಿಸಿದ್ದಾರೆ. ಅತ್ತ ಬೌಂಡರಿ ಲೈನ್ನಲ್ಲಿ ಫೀಲ್ಡಿಂಗ್ನಲ್ಲಿದ್ದ ನಿತೀಶ್ ಕುಮಾರ್ ರೆಡ್ಡಿ ಜಿಂಕೆಯ ವೇಗದಲ್ಲಿ ಓಡಿ ಬಂದರು. ಚೆಂಡಿನ ಮೇಲೆ ಹದ್ದಿನ ಕಣ್ಣಿಡುವ ಮೂಲಕ ಅದ್ಭುತವಾಗಿ ಡೈವ್ ಹೊಡೆದು ಕ್ಯಾಚ್ ಹಿಡಿದಿದ್ದಾರೆ.
ಈ ಅತ್ಯುತ್ತಮ ಡೈವಿಂಗ್ ಕ್ಯಾಚ್ ವಿಡಿಯೋ ಇದೀಗ ವೈರಲ್ ಆಗಿದೆ. ಅಲ್ಲದೆ ಯುವ ಆಟಗಾರ ನಿತೀಶ್ ಕುಮಾರ್ ರೆಡ್ಡಿ ಅವರ ಫೀಲ್ಡಿಂಗ್ ಟೈಮಿಂಗ್ ಬಗ್ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು ಜೋಸ್ ಬಟ್ಲರ್ (68) ಅವರ ಅರ್ಧಶತಕದ ನೆರವಿನಿಂದ 132 ರನ್ ಕಲೆಹಾಕಿತು. ಈ ಗುರಿಯನ್ನು ಟೀಮ್ ಇಂಡಿಯಾ 3 ವಿಕೆಟ್ ಕಳೆದುಕೊಂಡು 12.5 ಓವರ್ಗಳಲ್ಲಿ ಚೇಸ್ ಮಾಡಿ ಭರ್ಜರಿ ಜಯ ಸಾಧಿಸಿದೆ.