IND vs NZ: ಅದೃಷ್ಟ ಕೈಕೊಟ್ಟಾಗ ಹೀಗೆಲ್ಲ ಆಗುತ್ತೆ; ಬ್ಯಾಡ್ ಲಕ್ ರೋಹಿತ್ ಶರ್ಮಾ

|

Updated on: Oct 18, 2024 | 4:34 PM

Rohit Sharma: ಬೆಂಗಳೂರು ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ ಒಂದಂಕಿಗೆ ಸುಸ್ತಾಗಿದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಎರಡನೇ ಇನ್ನಿಂಗ್ಸ್​ನಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಈ ಮೂಲಕ ಸಂಕಷ್ಟದಲ್ಲಿದ್ದ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಆದರೆ ಅರ್ಧಶತಕ ಸಿಡಿಸಿದ ಬೆನ್ನಲ್ಲೇ ರೋಹಿತ್ ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದರು.

ಬೆಂಗಳೂರು ಟೆಸ್ಟ್‌ನಲ್ಲಿ ಕಿವೀಸ್ ತಂಡವನ್ನು 402 ರನ್​ಗಳಿಗೆ ಆಲೌಟ್ ಮಾಡಿದ್ದ ಟೀಂ ಇಂಡಿಯಾ ತನ್ನ ಎರಡನೇ ಇನ್ನಿಂಗ್ಸ್​ನಲ್ಲಿ ದಿಟ್ಟ ಹೋರಾಟ ನೀಡುತ್ತಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 46 ರನ್​ಗಳಿಗೆ ಆಲೌಟ್ ಆಗಿದ್ದ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್​ನಲ್ಲಿ ಉತ್ತಮ ಆರಂಭ ಪಡೆದುಕೊಂಡಿದೆ. ತಂಡದ ಪರ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಹಾಗೂ ನಾಯಕ ರೋಹಿತ್ ಶರ್ಮಾ ಮೊದಲ ವಿಕೆಟ್​ಗೆ 72 ರನ್​ಗಳ ಜೊತೆಯಾಟ ನೀಡಿದರು. ಈ ವೇಳೆ ನಾಯಕ ರೋಹಿತ್ ಶರ್ಮಾ ಭರ್ಜರಿ ಅರ್ಧಶತಕ ಕೂಡ ಬಾರಿಸಿದರು. ಹಿಟ್‌ಮ್ಯಾನ್ 63 ಎಸೆತಗಳಲ್ಲಿ 8 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 52 ರನ್ ಗಳಿಸಿದರು. ಆದರೆ ಅರ್ಧಶತಕ ಸಿಡಿಸಿದ ಕೂಡಲೇ ರೋಹಿತ್ ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದರು.

ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್

ಭಾರತದ ಇನ್ನಿಂಗ್ಸ್​ನ 22ನೇ ಓವರ್​ ಬೌಲ್ ಮಾಡಿದ ಎಜಾಜ್ ಪಟೇಲ್ ಅವರ ಎಸೆತವನ್ನು ರೋಹಿತ್ ಡಿಫೆಂಡ್ ಮಾಡಿಕೊಂಡರು. ಆದರೆ ರೋಹಿತ್ ಶರ್ಮಾ ಅವರ ಬ್ಯಾಟ್‌ಗೆ ತಗುಲಿ ಕೆಳಕ್ಕೆ ಬಿದ್ದ ಚೆಂಡು ಆ ಬಳಿಕ ವಿಕೆಟ್​ನತ್ತ ಹೋಗಲಾರಂಭಿಸಿತು. ಈ ವೇಳೆ ರೋಹಿತ್ ಚೆಂಡನ್ನು ನೋಡುತ್ತಿದ್ದರೂ ಅದನ್ನು ತಡೆಯುವ ಪ್ರಯತ್ನ ಮಾಡಲಿಲ್ಲ. ಸ್ವಲ್ಪ ಸಮಯದೊಳಗೆ ಚೆಂಡು ವಿಕೆಟ್‌ಗೆ ಬಡಿದು ರೋಹಿತ್ ಬೌಲ್ಡ್ ಆದರು. ಈ ರೀತಿ ವಿಕೆಟ್ ಕಳೆದುಕೊಂಡ ರೋಹಿತ್ ನಿರಾಸೆಯಿಂದ ಪೆವಿಲಿಯನ್​ಗೆ ಮರಳಿದರು. ಇದೀಗ ರೋಹಿತ್ ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Follow us on