ಭಾರತದಲ್ಲಿ ಮುಂದಿನ ಜಾಗತಿಕ ಶೃಂಗಸಭೆ; ಪ್ಯಾರಿಸ್‌ನಲ್ಲಿ ಪ್ರಧಾನಿ ಮೋದಿ ಘೋಷಣೆ
ಪ್ಯಾರಿಸ್‌ನಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಸಹ-ಅಧ್ಯಕ್ಷತೆ ವಹಿಸಿದ್ದ ಎಐ ಕ್ರಿಯಾ ಶೃಂಗಸಭೆಯಲ್ಲಿ ತಮ್ಮ ಸಮಾರೋಪ ಭಾಷಣದಲ್ಲಿ ಪ್ರಧಾನಿ ಮೋದಿ, ಇಂದಿನ ಚರ್ಚೆಗಳು ಒಂದು ವಿಷಯವನ್ನು ಹೊರತಂದಿವೆ. ದೃಷ್ಟಿಕೋನದಲ್ಲಿ ಏಕತೆ ಮತ್ತು ಪಾಲುದಾರರಲ್ಲಿ ಉದ್ದೇಶದಲ್ಲಿ ಏಕತೆ ಇದೆ ಎಂದು ಮೋದಿ ಹೇಳಿದ್ದಾರೆ. ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಎಐ ಕ್ರಿಯಾ ಶೃಂಗಸಭೆಯು ವಿಶ್ವ ನಾಯಕರು, ನೀತಿ ನಿರೂಪಕರು, ಚಿಂತಕರು, ನಾವೀನ್ಯಕಾರರು ಮತ್ತು ಯುವಕರನ್ನು ಎಐ ಸುತ್ತ ಅರ್ಥಪೂರ್ಣ ಸಂವಾದ ನಡೆಸಲು ಒಟ್ಟುಗೂಡಿಸುವ ಶ್ಲಾಘನೀಯ ಪ್ರಯತ್ನವಾಗಿದೆ ಎಂದು ಮೋದಿ ಹೇಳಿದ್ದಾರೆ.
ಪ್ಯಾರಿಸ್: ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಎಐ ಫೌಂಡೇಶನ್ ಮತ್ತು ಕೌನ್ಸಿಲ್ ಫಾರ್ ಸಸ್ಟೈನಬಲ್ ಎಐ ಅನ್ನು ಸ್ಥಾಪಿಸುವ ನಿರ್ಧಾರವನ್ನು ಸ್ವಾಗತಿಸಿದ್ದು, ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಎಲ್ಲಾ ಪಾಲುದಾರರಲ್ಲಿ ಏಕತೆ ಇದೆ ಎಂದು ನಂಬುವುದಾಗಿ ಹೇಳಿದ್ದಾರೆ. ಈ ಉಪಕ್ರಮಗಳಿಗಾಗಿ ಫ್ರಾನ್ಸ್ ಮತ್ತು ನನ್ನ ಆತ್ಮೀಯ ಸ್ನೇಹಿತ ಅಧ್ಯಕ್ಷ ಮ್ಯಾಕ್ರನ್ ಅವರನ್ನು ನಾನು ಅಭಿನಂದಿಸುತ್ತೇನೆ. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಹಾಗೇ, ಮುಂದಿನ ಜಾಗತಿಕ ಶೃಂಗಸಭೆಯನ್ನು ಭಾರತದಲ್ಲಿ ಆಯೋಜಿಸುತ್ತಿರುವುದು ನಮಗೆ ಸಂತೋಷಕರ ಸಂಗತಿ ಎಂದು ಮೋದಿ ಹೇಳಿದ್ದಾರೆ. ಮುಂದಿನ ವರ್ಷದ ಶೃಂಗಸಭೆ ಭಾರತದ ಯಾವ ಪ್ರದೇಶದಲ್ಲಿ ನಡೆಯಲಿದೆ ಎಂಬುದು ಇನ್ನೂ ಖಚಿತವಾಗಿಲ್ಲ.
ಎಐ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ನಮ್ಮ ವೈವಿಧ್ಯತೆಯನ್ನು ಬಳಸಿಕೊಂಡು ಭಾರತ ತನ್ನದೇ ಆದ ದೊಡ್ಡ ಭಾಷಾ ಮಾದರಿಯನ್ನು ನಿರ್ಮಿಸುತ್ತಿದೆ. ಸೂರ್ಯನ ಶಕ್ತಿಯನ್ನು ಬಳಸಿಕೊಳ್ಳಲು ಅಂತಾರಾಷ್ಟ್ರೀಯ ಸೌರ ಒಕ್ಕೂಟದಂತಹ ಉಪಕ್ರಮಗಳ ಮೂಲಕ ಭಾರತ ಮತ್ತು ಫ್ರಾನ್ಸ್ ಹಲವು ವರ್ಷಗಳಿಂದ ಒಟ್ಟಾಗಿ ಕೆಲಸ ಮಾಡಿವೆ ಎಂದು ಹೇಳಿದ್ದಾರೆ. ಸುಸ್ಥಿರ ಎಐ ಎಂದರೆ ಶುದ್ಧ ಶಕ್ತಿಯನ್ನು ಬಳಸುವುದು ಎಂದರ್ಥವಲ್ಲ. ಎಐ ಮಾದರಿಗಳು ಗಾತ್ರ, ಡೇಟಾ ಅಗತ್ಯತೆಗಳು ಮತ್ತು ಸಂಪನ್ಮೂಲಗಳ ಅವಶ್ಯಕತೆಗಳಲ್ಲಿಯೂ ಸಹ ಪರಿಣಾಮಕಾರಿ ಮತ್ತು ಸುಸ್ಥಿರವಾಗಿರಬೇಕು ಎಂದು ಮೋದಿ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ