IND vs NZ: ಕೊಹ್ಲಿಯ ಮಾತು ಕೇಳಿದ ಸುಂದರ್ಗೆ ಸಿಕ್ತು ಕಿವೀಸ್ ನಾಯಕನ ವಿಕೆಟ್; ವಿಡಿಯೋ ನೋಡಿ
Washington Sundar's Magical Spin: ಮುಂಬೈನಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ಟೆಸ್ಟ್ ಪಂದ್ಯದ ಮೊದಲ ದಿನ ವಾಷಿಂಗ್ಟನ್ ಸುಂದರ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ವಿರಾಟ್ ಕೊಹ್ಲಿಯ ಸಲಹೆಯ ಮೇರೆಗೆ ಬೌಲಿಂಗ್ ಮಾಡಿದ ಸುಂದರ್, ಲೇಥಮ್ ಮತ್ತು ರವೀಂದ್ರರ ವಿಕೆಟ್ ಪಡೆದರು. ಪುಣೆ ಟೆಸ್ಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಸುಂದರ್ ಮುಂಬೈನಲ್ಲೂ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಸುಂದರ್‌ರ ಸ್ಪಿನ್ ಬೌಲಿಂಗ್ ಕಿವೀಸ್ ಬ್ಯಾಟ್ಸ್‌ಮನ್‌ಗಳಿಗೆ ಸವಾಲಾಗಿ ಪರಿಣಮಿಸಿದೆ.
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಇದುವರೆಗೆ ಉಭಯ ತಂಡಗಳಿಂದ ಸಮಬಲದ ಹೋರಾಟ ಕಂಡುಬಂದಿದೆ. ಅದರಲ್ಲೂ ಟೀಂ ಇಂಡಿಯಾ ಪರ ಸತತ ಎರಡನೇ ಪಂದ್ಯದಲ್ಲೂ ವಾಷಿಂಗ್ಟನ್ ಸುಂದರ್ ತಮ್ಮ ಮ್ಯಾಜಿಕಲ್ ಸ್ಪಿನ್ನ ಮೂಲಕ ಕಿವೀಸ್ ಬ್ಯಾಟರ್ಗಳಿಗೆ ಚಳ್ಳೆ ಹಣ್ಣು ತಿನಿಸಿದ್ದಾರೆ. ಪುಣೆ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಸುಂದರ್ ಇದೀಗ ಮುಂಬೈ ಟೆಸ್ಟ್‌ನ ಮೊದಲ ದಿನದ ಮೊದಲ ಸೆಷನ್‌ನಲ್ಲೇ ಎರಡು ವಿಕೆಟ್ ಉರುಳಿಸಿದರು. ಸುಂದರ್ ಸ್ಪಿನ್ ಮೋಡಿ ಅರಿಯದ ಕಿವೀಸ್ ಬ್ಯಾಟರ್ ಟಾಮ್ ಲೇಥಮ್ ಮತ್ತು ರಚಿನ್ ರವೀಂದ್ರ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ. ಸುಂದರ್ ಉರುಳಿಸಿದ ಈ ಎರಡು ವಿಕೆಟ್ಗಳಲ್ಲಿ ಒಂದು ವಿಕೆಟ್ ಮಾತ್ರ ಕೊಹ್ಲಿ ನೀಡಿದ ಸಲಹೆಯಿಂದ ಉರುಳಿದ್ದು, ರೋಚಕ ಕ್ಷಣಕ್ಕೆ ಸಾಕ್ಷಿಯಾಯಿತು.
ವಾಷಿಂಗ್ಟನ್ ‘ಸುಂದರ’ ಪ್ರದರ್ಶನ
ಮುಂಬೈ ಟೆಸ್ಟ್‌ನಲ್ಲಿ ವಾಷಿಂಗ್ಟನ್ ಸುಂದರ್ ನ್ಯೂಜಿಲೆಂಡ್ ನಾಯಕ ಟಾಮ್ ಲೇಥಮ್ ಅವರ ಮೊದಲ ವಿಕೆಟ್ ಪಡೆದರು. ಆರಂಭಿಕನಾಗಿ ಕಣಕ್ಕಿಳಿದಿದ್ದ ಕಿವೀಸ್ ನಾಯಕ ಬಿಗ್ ಇನ್ನಿಂಗ್ಸ್ ಆಡುವ ಸುಳಿವು ನೀಡಿದ್ದರು. ಈ ವೇಳೆ 16 ನೇ ಓವರ್‌ನಲ್ಲಿ ದಾಳಿಗಿಳಿದ ಸುಂದರ್ಗೆ ವಿರಾಟ್ ಕೊಹ್ಲಿ, ರೌಂಡ್ದ ವಿಕೆಟ್‌ನಿಂದ ನಿರ್ದಿಷ್ಟ ಲೈನ್ ಮತ್ತು ಲೆಂಗ್ತ್‌ನಲ್ಲಿ ಬೌಲ್ ಮಾಡಲು ಸಲಹೆ ನೀಡಿದರು. ಇತ್ತ ಕೊಹ್ಲಿ ಸಲಹೆಯಂತೆ ಬೌಲ್ ಮಾಡಿದ ಸುಂದರ್ಗೆ ಲೇಥಮ್ ವಿಕೆಟ್ ಸಿಕ್ಕಿತು. ಇದಲ್ಲದೆ 20ನೇ ಓವರ್‌ನಲ್ಲಿ ಸುಂದರ್, ರಚಿನ್ ರವೀಂದ್ರ ಅವರನ್ನು ಅದೇ ರೀತಿಯಲ್ಲಿ ಬೌಲ್ಡ್ ಮಾಡುವಲ್ಲಿ ಯಶಸ್ವಿಯಾದರು.
ಪುಣೆ ಟೆಸ್ಟ್‌ನಲ್ಲಿ 11 ವಿಕೆಟ್ ಉರುಳಿಸಿದ್ದ ಸುಂದರ್
ಮುಂಬೈ ಟೆಸ್ಟ್ಗೂ ಮುನ್ನ ನಡೆದ ಪುಣೆ ಟೆಸ್ಟ್ನಲ್ಲೂ ವಾಷಿಂಗ್ಟನ್ ಸುಂದರ್ ಅದ್ಭುತ ಪ್ರದರ್ಶನ ನೀಡಿದ್ದರು. ಪುಣೆ ಟೆಸ್ಟ್‌ನಲ್ಲಿ 11 ವಿಕೆಟ್ ಪಡೆದಿದ್ದ ಸುಂದರ್, ಮೊದಲ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಉರುಳಿಸಿದ್ದರೆ, ಎರಡನೇ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಪಡೆದಿದ್ದರು. ಆದಾಗ್ಯೂ ಟೀಂ ಇಂಡಿಯಾ ತನ್ನ ಬ್ಯಾಟಿಂಗ್ ವೈಫಲ್ಯದಿಂದಾಗಿ ಪುಣೆ ಟೆಸ್ಟ್ ಸೋಲಬೇಕಾಗಿ ಬಂತು. ಇದರ ಹೊರತಾಗಿಯೂ ಸುಂದರ್ ತಮ್ಮ ಕೈಚಳಕದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:51 pm, Fri, 1 November 24