ಇಂಡಿಗೋ ವಿಮಾನ ರದ್ದು: ಕೆಎಸ್ಆರ್ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನಗಳ ಹಾರಾಟದಲ್ಲಿನ ವ್ಯತ್ಯಯದಿಂದಾಗಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ತೀವ್ರವಾಗಿ ಕುಸಿದಿದೆ. ವಿಮಾನಗಳ ರದ್ದತಿಯಿಂದ ಹಲವು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಪರದಾಡುತ್ತಿದ್ದರೆ, ಬೆಂಗಳೂರಿನ ವಿವಿಧೆಡೆ ಸಂಚರಿಸುವ ಬಿಎಂಟಿಸಿ ವಾಯುವಜ್ರ ಮತ್ತು ಕೆಎಸ್ಆರ್ಟಿಸಿ ಫ್ಲೈ ಬಸ್ಗಳು ಪ್ರಯಾಣಿಕರಿಲ್ಲದೆ ಖಾಲಿ ಖಾಲಿಯಾಗಿ ಓಡುತ್ತಿವೆ.
ಬೆಂಗಳೂರು, ಡಿಸೆಂಬರ್ 5: ಇಂಡಿಗೋ ವಿಮಾನಗಳ ಹಾರಾಟದಲ್ಲಿನ ವ್ಯತ್ಯಯದಿಂದಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ವಿಮಾನಗಳು ರದ್ದಾಗುತ್ತಿರುವ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಒಳಭಾಗದಲ್ಲಿ ಪ್ರಯಾಣಿಕರು ಪರದಾಡುತ್ತಿದ್ದರೆ, ಹೊರಭಾಗದಲ್ಲಿ ಬೆಂಗಳೂರಿನ ವಿವಿಧೆಡೆ ಸಂಚರಿಸುವ ಬಸ್ಗಳು ಪ್ರಯಾಣಿಕರಿಲ್ಲದೆ ಖಾಲಿ ಖಾಲಿಯಾಗಿವೆ. ವಿಮಾನ ನಿಲ್ದಾಣದ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರಿರುತ್ತಾರೆ. ಆದರೆ, ಕಳೆದ ಮೂರು ದಿನಗಳಿಂದ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಫ್ಲೈಬಸ್ಗಳ ಆದಾಯ ಸಂಗ್ರಹದಲ್ಲೂ ಭಾರಿ ಕುಸಿತವಾಗಿದೆ.
ವಿಮಾನ ನಿಲ್ದಾಣಕ್ಕೆ ಆಗಮಿಸುವ ಇಂಡಿಗೋ ವಿಮಾನಗಳ ರದ್ದತಿಯೇ ಈ ಪರಿಸ್ಥಿತಿಗೆ ಪ್ರಮುಖ ಕಾರಣವಾಗಿದೆ. ಬೇರೆ ರಾಜ್ಯಗಳಿಂದ ಬರುವ ಹೆಚ್ಚಿನ ವಿಮಾನಗಳು ಇಂಡಿಗೋ ಆಗಿವೆ. ಇದರಿಂದಾಗಿ ಆಗಮನ ಗೇಟ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ತೀರಾ ವಿರಳವಾಗಿದ್ದು, ಬಸ್ ನಿಲ್ದಾಣಗಳು ಬಣಗುಡುತ್ತಿವೆ. ಸಾಮಾನ್ಯವಾಗಿ 30-40 ಪ್ರಯಾಣಿಕರಿಂದ ತುಂಬುವ ಬಸ್ಗಳಲ್ಲಿ ಈಗ 10 ಪ್ರಯಾಣಿಕರೂ ಇರುವುದಿಲ್ಲ ಎಂದು ಚಾಲಕರು ಹೇಳಿದ್ದಾರೆ.
