VIDEO: ವಿವಾದಕ್ಕೀಡಾದ ಶುಭ್ಮನ್ ಗಿಲ್ ರನೌಟ್
IPL 2025 GT vs SRH: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 224 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸನ್ರೈಸರ್ಸ್ ಹೈದರಾಬಾದ್ ತಂಡ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 186 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಗುಜರಾತ್ ಟೈಟಾನ್ಸ್ ತಂಡ 38 ರನ್ಗಳ ಜಯ ಸಾಧಿಸಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ನ 51ನೇ ಪಂದ್ಯದಲ್ಲಿ ಟಿವಿ ಅಂಪೈರ್ ನೀಡಿದ ತೀರ್ಪು ವಿವಾದಕ್ಕೀಡಾಗಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್ನಲ್ಲಿ ಟಾಸ್ ಗೆದ್ದ ಎಸ್ಆರ್ಹೆಚ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡಕ್ಕೆ ಶುಭ್ಮನ್ ಗಿಲ್ ಉತ್ತಮ ಆರಂಭ ಒದಗಿಸಿದ್ದರು.
ಆದರೆ 13ನೇ ಓವರ್ನ ಕೊನೆಯ ಎಸೆತದಲ್ಲಿ ರನ್ ಕದಿಯುವ ಯತ್ನದಲ್ಲಿ ಶುಭ್ಮನ್ ಗಿಲ್ ರನೌಟ್ಗೆ ತುತ್ತಾಗಿದ್ದರು. ಅತ್ತ ಎಸ್ಆರ್ಹೆಚ್ ಆಟಗಾರರು ಮನವಿ ಮಾಡುತ್ತಿದ್ದಂತೆ ಫೀಲ್ಡ್ ಅಂಪೈರ್ ರಿಪ್ಲೇ ಪರಿಶೀಲನೆಗೆ ಮನವಿ ಮಾಡಿದರು. ಅದರಂತೆ ಟಿವಿ ಅಂಪೈರ್ ವಿಡಿಯೋ ಪರಿಶೀಲಿಸಿದ್ದು, ಈ ವೇಳೆ ಗಿಲ್ ಅವರ ಬ್ಯಾಟ್ ಕ್ರೀಸ್ನಿಂದ ಹೊರಗಿರುವುದು ಕಂಡು ಬಂತು. ಇದೇ ವೇಳೆ ವಿಕೆಟ್ ಕೀಪರ್ ಗ್ಲೌಸ್ ಕೂಡ ವಿಕೆಟ್ಗೆ ಬಡಿದಿತ್ತು.
ಇಲ್ಲಿ ಚೆಂಡು ವಿಕೆಟ್ಗೆ ತಾಗಿ ಬೇಲ್ಸ್ ಬಿದ್ದಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿತ್ತು. ಬದಲಾಗಿ ವಿಕೆಟ್ ಕೀಪರ್ ಹೆನ್ರಿಕ್ ಕ್ಲಾಸೆನ್ ಗ್ಲೌಸ್ ತಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಇದಾಗ್ಯೂ ಟಿವಿ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದು ವಿವಾದಕ್ಕೀಡಾಯಿತು. ಅಂಪೈರ್ ನಿರ್ಧಾರದಿಂದ ಕೋಪಗೊಂಡ ಶುಭ್ಮನ್ ಗಿಲ್ ಡಗೌಟ್ಗೆ ಆಗಮಿಸಿ ಮೂರನೇ ಅಂಪೈರ್ ಜೊತೆ ವಾದಕ್ಕಿಳಿದರು. ಇದೀಗ ಟಿವಿ ಅಂಪೈರ್ನ ತೀರ್ಪಿನ ಬಗ್ಗೆ ಅನೇಕರು ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 224 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸನ್ರೈಸರ್ಸ್ ಹೈದರಾಬಾದ್ ತಂಡ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 186 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಗುಜರಾತ್ ಟೈಟಾನ್ಸ್ ತಂಡ 38 ರನ್ಗಳ ಜಯ ಸಾಧಿಸಿದೆ.