VIDEO: ಕರುಣ್ ನಾಯರ್​ನ ನಂಬಿ ರನ್ ಕಳೆದುಕೊಂಡ ಪಂಜಾಬ್ ಕಿಂಗ್ಸ್

Updated on: May 25, 2025 | 7:59 AM

IPL 2025 PBKS vs DC: ಇಂಡಿಯನ್ ಪ್ರೀಮಿಯರ್ ಲೀಗ್​ನ 66ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್​ಗಳಲ್ಲಿ 206 ರನ್​ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 19.3 ಓವರ್​ಗಳಲ್ಲಿ 208 ರನ್ ಬಾರಿಸಿ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಐಪಿಎಲ್​ನ 66ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಂಜಾಬ್ ಪಡೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಇದರ ನಡುವೆ ಮೋಹಿತ್ ಶರ್ಮಾ ಅವರ ಎಸೆತದಲ್ಲಿ ಶಶಾಂಕ್ ಸಿಂಗ್ ಲಾಂಗ್​ ಆನ್​ನತ್ತ ಭರ್ಜರಿಯಾಗಿ ಬಾರಿಸಿದ್ದರು.

ಆದರೆ ಅಲ್ಲೇ ಫೀಲ್ಡಿಂಗ್​ನಲ್ಲಿದ್ದ ಕರುಣ್ ನಾಯರ್, ಹಾರಿ ಚೆಂಡನ್ನು ಹಿಡಿದರು. ಆದರೆ ನಿಯಂತ್ರಣ ತಪ್ಪುತ್ತಿದ್ದಂತೆ ಅವರು ಚೆಂಡನ್ನು ಹೊರಗೆ ಹಾಕಿ ಬೌಂಡರಿ ಲೈನ್ ದಾಟಿದರು. ಇದಾದ ಬಳಿಕ ಕರುಣ್ ನಾಯರ್ ಶೂಸ್ ತಾಗಿದೆ, ಸಿಕ್ಸ್ ಎಂದು ಸನ್ನೆ ಮಾಡಿದರು. ಹೀಗಾಗಿ ಪಂಜಾಬ್ ಕಿಂಗ್ಸ್ ಬ್ಯಾಟರ್​ಗಳು ರನ್ ಓಡಿರಲಿಲ್ಲ.

ಆ ಬಳಿಕ ಮೂರನೇ ಅಂಪೈರ್​ಗೆ ವಿಡಿಯೋ ಪರಿಶೀಲಿಸಿದಾಗ, ಕರುಣ್ ನಾಯರ್ ಕಾಲು ಬೌಂಡರಿ ಲೈನ್​ ಮುಟ್ಟಿದೆ ಎಂಬುದಕ್ಕೆ ಯಾವುದೇ ಪುರಾವೆ ಕಾಣಿಸಲಿಲ್ಲ. ಹೀಗಾಗಿ ಟಿವಿ ಅಂಪೈರ್ ಅದು ಸಿಕ್ಸ್ ಅಲ್ಲ ಎಂದು ತೀರ್ಪು ನೀಡಿದ್ದಾರೆ. ಇತ್ತ ಸಿಕ್ಸ್ ಆಗಿದೆ ಎಂದು ಕರುಣ್ ನಾಯರ್ ನೀಡಿದ ಸನ್ನೆಯಿಂದಾಗಿ ಶಶಾಂಕ್ ಸಿಂಗ್ ಹಾಗೂ ಶ್ರೇಯಸ್ ಅಯ್ಯರ್ ಕೇವಲ ಒಂದು ರನ್ ಮಾತ್ರ ಓಡಿದ್ದರು.

ಇದಾದ ಬಳಿಕ ಮೂರನೇ ಅಂಪೈರ್ ಅದು ಸಿಕ್ಸ್ ಅಲ್ಲ ಎಂದು ಪಂಜಾಬ್ ಕಿಂಗ್ಸ್​ ತಂಡಕ್ಕೆ ಕೇವಲ ಒಂದು ರನ್ ಮಾತ್ರ ನೀಡಿದ್ದಾರೆ. ಅಂದರೆ ಇಲ್ಲಿ ಕರುಣ್ ನಾಯರ್ ನೀಡಿದ ತೀರ್ಪನ್ನು ನಂಬಿ ಪಂಜಾಬ್ ಕಿಂಗ್ಸ್ ಬ್ಯಾಟರ್​ಗಳು ಒಂದೆರಡು ರನ್​ಗಳನ್ನು ಕಳೆದುಕೊಂಡರು. ಅದರಲ್ಲೂ ಆಟಗಾರನೇ ಸಿಕ್ಸ್ ನೀಡಿದ ಬಳಿಕ ಮೂರನೇ ಅಂಪೈರ್ ತೀರ್ಪು ಬದಲಿಸಿದ್ದೇಕೆ ಎಂಬ ಪ್ರಶ್ನೆಗಳನ್ನು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಮುಂದಿಡಲಾಗುತ್ತಿದೆ.

ಒಟ್ಟಿನಲ್ಲಿ ಮೂರನೇ ಅಂಪೈರ್ ತೀರ್ಪಿನಿಂದಾಗಿ ಪಂಜಾಬ್ ಕಿಂಗ್ಸ್ 5 ರನ್ ಕಳೆದುಕೊಂಡರೆ, ಕರುಣ್ ನಾಯರ್ ಅವರ ತೀರ್ಪಿನಿಂದಾಗಿ ಒಂದೆರಡು ರನ್​ ಕಳೆದುಕೊಂಡಿತು.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್​ಗಳಲ್ಲಿ 206 ರನ್​ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 19.3 ಓವರ್​ಗಳಲ್ಲಿ 208 ರನ್ ಬಾರಿಸಿ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

Published on: May 25, 2025 07:59 AM