ಬೆಂಗಳೂರು: ವಿಧಾನ ಸಭಾ ಬಜೆಟ್ ಅಧಿವೇಶನದ (Karnataka Budget Session) ಇಂದಿನ ಕಾರ್ಯಕಲಾಪಗಳಲ್ಲಿ ಐಪಿಎಲ್ ಬೆಟ್ಟಿಂಗ್ (IPL betting) ಕಳ್ಳದಂಧೆ ಪ್ರತಿಧ್ವನಿಸಿತು. ಕಾಂಗ್ರೆಸ್ ಶಾಸಕ ರವಿ ಗಣಿಗ ಮಂಡ್ಯದಲ್ಲಿ ನಡೆಯುವ ಬೆಟ್ಟಿಂಗ್ ದಂಧೆ ಬಗ್ಗೆ ಪ್ರಸ್ತಾಪಿಸಿದಾಗ ದನಿಗೂಡಿಸಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ (R Ashoka), ಇದು ಕೇವಲ ಮಂಡ್ಯದ ಸಮಸ್ಯೆ ಮಾತ್ರ ಅಲ್ಲ ರಾಜ್ಯಾದ್ಯಂತ ಹಬ್ಬಿರುವ ಸಾಮಾಜಿಕ ಪಿಡುಗು ಎಂದು ಹೇಳಿದರು. ಐಪಿಎಲ್ ನಡೆಯುವಾಗ ಬೆಂಗಳೂರು ನಗರದಲ್ಲೇ ಪ್ರತಿ ಪಂದ್ಯಕ್ಕೆ 1000 ಕೋಟಿ ರೂ. ಬೆಟ್ಟಿಂಗ್ ನಡೆಯುತ್ತದೆ, ಬೆಟ್ಟಿಂಗ್ ನಡೆಸುವ ಜನ ಕೋಟಿ ಕೋಟಿ ಬೆಲೆ ಬಾಳುವ ಮನೆಗಳನ್ನು ಕಟ್ಟಿಕೊಂಡು ವಾಸವಾಗಿದ್ದಾರೆ. ಆದರೆ ಬೆಟ್ಟಿಂಗ್ ನಲ್ಲಿ ತೊಡಗುವವರು ಮನೆಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ ಎಂದು ಅಶೋಕ ಹೇಳಿದರು. ಜಯನಗರದ ಒಬ್ಬ ಡೆವೆಲಪರ್ 120 ಕೋಟಿ ರೂ ಕಳೆದುಕೊಂಡು ದಿವಾಳಿಯಾಗಿದ್ದಾನೆ ಎಂದು ಹೇಳಿದ ಅವರು ಬಿಟ್ಟಂಗ್ ದಂಧೆ ನಡೆಸುವವರು ಭಾರೀ ಪ್ರಭಾವಶಾಲಿಗಳಾಗಿದ್ದಾರೆ ಮತ್ತು ತಾವು ಗೃಹ ಸಚಿವನಾಗಿದ್ದಾಗ ಸದನದಲ್ಲಿದ್ದವರೇ ಬೆಟ್ಟಿಂಗ್ ದೊರೆಗಳ ಬಗ್ಗೆ ವಕಾಲತ್ತು ಮಾಡಲು ಬಂದಿದ್ದರು ಎಂದು ಹೇಳಿದರು. ಈಗ ರಾಜ್ಯದ ಗೃಹ ಸಚಿವರಾಗಿರುವ ಜಿ ಪರಮೇಶ್ವರ್ ಅವರು ಬೆಟ್ಟಿಂಗ್ ಪಿಡುಗನ್ನು ನಿರ್ಮೂಲ ಮಾಡಲು ಕೆಲ ಕಾಂಕ್ರೀಟ್ ಕ್ರಮಗಳನ್ನು ಕೈಗೆತ್ತಿಕೊಳ್ಳಬೇಕೆಂದು ಅಶೋಕ ಮನವಿ ಮಾಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿಅ ಇಲ್ಲಿ ಕ್ಲಿಕ್ ಮಾಡಿ